ಶಿವಮೊಗ್ಗ: ರೈತರು ಕೃಷಿ ಉತ್ಪನ್ನಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರಾಟ ಮಾಡಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಇಂದು ಮ್ಯಾಮ್ಕೋಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಪಿಎಂಸಿ ಮತ್ತು ಸಹಕಾರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಅನುಷ್ಠಾನದಿಂದ ರೈತರಿಗೆ ಅನುಕೂಲವಾಗಿ ಆರ್ಥಿಕ ಲಾಭವಾಗಲಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ನೀಡಿದ್ದರಿಂದ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಬರಬೇಕಾದ ಆದಾಯದಲ್ಲಿ ಸುಮಾರು 600 ಕೋಟಿ ರೂ.ಯಷ್ಟು ಕೊರತೆ ಉಂಟಾಗುತ್ತಿದೆ. ಇದನ್ನು ಸರಿದೂಗಿಸಲು ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಎಪಿಎಂಸಿ ಕಲಂ 8ರ ನಿಯಮಕ್ಕೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲಾಗಿದೆ. ಸದನದಲ್ಲಿ ಚರ್ಚಿಸಿದ ಬಳಿಕ ಆದೇಶವಾಗಿ ಹೊರಬರಲಿದೆ. ಆದೇಶ ತಿದ್ದುಪಡಿಯಿಂದ ರಾಜ್ಯ ಮಟ್ಟದ ಎಪಿಎಂಸಿ ಮಾರುಕಟ್ಟೆ ನಿಯಮಗಳಿಗೆ ಯಾವುದೇ ವಿಧದ ಧಕ್ಕೆ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಆರೋಗ್ಯ ಇಲಾಖೆಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಜಿಲ್ಲಾಮಟ್ಟದಲ್ಲಿ ಸಹಕಾರ ಸಂಘ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಹಕಾರ ಸಂಘಗಳಲ್ಲಿ ಅನುಷ್ಠಾನದಲ್ಲಿ ಇರುವ ಕಾಯಕ ಯೋಜನೆಯಂತೆ ಆಶಾ ಕಾರ್ಯಕರ್ತೆಯರಿಗೂ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದರು.
ಕೊರೊನಾ ಸೋಂಕಿನ ಭೀತಿಯಿಂದ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಯುವಕರು ತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಯುವಕರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಲು ಅನುಕೂಲ ಆಗುವಂತೆ ಹೊಸ ರೈತರಿಗೆ ಸಾಲ ಸೌಲಭ್ಯ ನೀಡಿ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ ಸೋಮಶೇಖರ್ ಹೇಳಿದರು.
ರಾಜ್ಯದ ಹಲವು ಗ್ರಾಮೀಣ ವಿಎಸ್ಎಸ್ಎನ್ ಸಹಕಾರ ಸಂಘಗಳಲ್ಲಿ ಅನಾಮಧೇಯ ವ್ಯಕ್ತಿಗಳ ಹೆಸರಲ್ಲಿ ಸಾಲ ಸೌಲಭ್ಯ ನೀಡಿಕೆ ಕಂಡುಬಂದಿದೆ. ಅಂತಹವರ ಹೆಸರಿನಲ್ಲಿ ಸಾಲ ಮನ್ನಾ ಆಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿವೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದರು.
ಇಲಾಖೆಯ ಉಪನಿಬಂಧಕ ಎಸ್ ನಾಗೇಶ್ ಡೋಂಗ್ರೆ, ಲೆಕ್ಕ ಪರಿಶೋಧನ ಇಲಾಖೆಯ ಉಪನಿರ್ದೇಶಕ ಮಹೇಶ್ವರಪ್ಪ, ಜಿಲ್ಲೆಯ ಎಲ್ಲ ತಾಲೂಕುಗಳ ಎಪಿಎಂಸಿ ಕಾರ್ಯದರ್ಶಿಗಳು, ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.