ಶಿವಮೊಗ್ಗ: ಶಿವಮೊಗ್ಗ ನಗರ ಮತ್ತೊಂದು ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಲಿದೆ. ಶಿವಮೊಗ್ಗ ನಗರದ ಹೊರವಲಯದ ಗುಡ್ಡೆಕಲ್ಲಿನ ಮೇಲೆ ಪ್ರಪಂಚದ ಅತಿ ಎತ್ತರವಾದ ಬಾಲ ಸುಬ್ರಮಣ್ಯ ದೇವರ ಪುತ್ಥಳಿಯನ್ನು ಸ್ಥಾಪನೆ ಮಾಡಲಾಗುತ್ತಿದೆ. ಪುತ್ಥಳಿಯ ಸ್ಥಾಪನೆಗೆ ಇಂದು ಗುಡ್ಡೆಕಲ್ಲಿನ ಮೇಲ್ಭಾಗದಲ್ಲಿ ಭಾನುವಾರ ಗುದ್ದಲಿ ಪೂಜೆ ಸಲ್ಲಿಸಲಾಯಿತು. ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ(ಚನ್ನಿ) ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಪ್ರಪಂಚದ ಅತಿ ಎತ್ತರ ಪುತ್ಥಳಿ: ಶಿವಮೊಗ್ಗದಲ್ಲಿ ತಯಾರಾಗಲಿರುವ ಬಾಲ ಸುಬ್ರಮಣ್ಯ ಸ್ವಾಮಿ ಪುತ್ಥಳಿಯು ಪ್ರಪಂಚದಲ್ಲಿಯೇ ಅತಿ ಎತ್ತರವಾಗಿರುತ್ತದೆ. ಇದು 151 ಅಡಿ ಎತ್ತರದ ಪುತ್ಥಳಿಯಾಗಲಿದೆ. ಮಲೇಷಿಯಾದಲ್ಲಿ 108 ಅಡಿ ಎತ್ತರದ ಬಾಲಸುಬ್ರಮಣ್ಯ ಶಿಲೆ ಇದೆ. ಅದೇ ರೀತಿ ತಮಿಳುನಾಡಿನ ಸೇಲಂನಲ್ಲಿ 135 ಅಡಿ ಎತ್ತರದ ಪುತ್ಥಳಿ ಇದೆ. ಈಗ ತಯಾರಾಗಲಿರುವ ಪುತ್ಥಳಿಯು ಪ್ರಪಂಚದ ಪ್ರಥಮ ಹಾಗೂ ಎತ್ತರದ ಪುತ್ಥಳಿಯಾಗಲಿದೆ.
ಪುತ್ಥಳಿಯನ್ನು ಮಲೇಷಿಯಾ ಹಾಗೂ ಸೇಲಂನಲ್ಲಿ ನಿರ್ಮಾಣ ಮಾಡಿದ ತ್ಯಾಗರಾಜನ್ ಅವರೇ ನಿರ್ಮಾಣ ಮಾಡಲಿರುವುದು ಇನ್ನೊಂದು ವಿಶೇಷ. ಪುತ್ಥಳಿಯು ಗುಡ್ಡೆಕಲ್ಲಿನ ಬಂಡೆಗಳ ಮೇಲೆ ಸ್ಥಾಪನೆ ಮಾಡಲಿದ್ದಾರೆ. ಕಬ್ಬಿಣ, ಸಿಮೆಂಟ್ಗಳಿಂದ ನಿರ್ಮಾಣವಾಗಲಿದೆ. ಅಲ್ಲದೆ ಇದನ್ನು ಬಹು ವರ್ಣದಿಂದ ನಿರ್ಮಾಣ ಮಾಡಲಾಗುವುದು. ಬಾಲ ಸುಬ್ರಮಣ್ಯನ ಪುತ್ಥಳಿಯನ್ನು ಮುಂದಿನ ಎರಡು ವರ್ಷಗಳಲ್ಲಿ ನಿರ್ಮಾಣ ಮಾಡುವ ಉದ್ದೇಶವನ್ನು ಬಾಲಸುಬ್ರಮಣ್ಯ ದೇವಸ್ಥಾನ ಟ್ರಸ್ಟ್ ಹೊಂದಿದೆ. ಇದರ ನಿರ್ಮಾಣಕ್ಕೆ ಸುಮಾರು 20 ಲಕ್ಷ ರೂ. ಅವಶ್ಯಕತೆ ಇದೆ. ಇದಕ್ಕಾಗಿ ಟ್ರಸ್ಟ್ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ.
ಶಿವಮೊಗ್ಗದ ಬಾಲಸುಬ್ರಮಣ್ಯ ದೇವಾಲಯವು ಗುಡ್ಡೆಕಲ್ಲಿನಲ್ಲಿದೆ. ಇಲ್ಲಿ ಸಿದ್ದೇಶ್ವರ ದೇವಾಲಯವು ಇದೆ. ಇದು ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾದ ಗುಡ್ಡವಾಗಿದೆ. ಇದರ ಮೇಲೆ ಬಾಲಸುಬ್ರಮಣ್ಯನ ಪುತ್ಥಳಿ ನಿರ್ಮಾಣವಾದರೆ ಶಿವಮೊಗ್ಗದ ಎಲ್ಲಾ ಭಾಗಗಳಿಗೂ ಇದು ಕಾಣಸಿಗುತ್ತದೆ.
ಧನ ಸಂಗ್ರಹ ಮಾಡುವ ಪ್ರಯತ್ನ ಮಾಡಬೇಕು: ಗುದ್ದಲಿ ಪೂಜೆ ಕಾರ್ಯಕ್ರಮವು ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಜೀಗಳ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ಸಂಸದ ರಾಘವೇಂದ್ರ ಅವರು, ಪ್ರಪಂಚದ ಅತಿ ಎತ್ತರದ ಪುತ್ಥಳಿ ನಿರ್ಮಾಣ ಮಾಡಲು ಹೊರಟ ಟ್ರಸ್ಟ್ ಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಸರ್ಕಾರದ ಬಳಿ ಧನ ಸಂಗ್ರಹ ಮಾಡಲು ಪ್ರಯತ್ನಿಸಬೇಕು. ಸುಬ್ರಮಣ್ಯ ದೇವರು ತಮ್ಮ ತಂದೆ ತಾಯಿ ಅವರಿಂದ ಕೋಪ ಮಾಡಿಕೊಂಡು ಗುಡ್ಡದ ಮೇಲೆ ಬರುತ್ತಾರೆ. ಅದರಂತೆ ಇಲ್ಲೂ ಸಹ ಗುಡ್ಡದ ಮೇಲೆ ಸ್ಥಾಪನೆ ಮಾಡುತ್ತಿರುವುದು ನಿಜಕ್ಕೂ ಸಂತೋಷ ಎಂದರು.
ನಂತರ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಶಿವಮೊಗ್ಗದ ರಾಗಿಗುಡ್ಡದಲ್ಲಿ 108 ಅಡಿ ಎತ್ತರದ ಶಿವಲಿಂಗವನ್ನು ಸ್ಥಾಪಿಸುವ ಯೋಜನೆ ಇತ್ತು. ಅಲ್ಲಿಗೆ 5 ಕೋಟಿ ರೂ. ಹಣ ಬಂದಿದೆ. ಅದನ್ನು ಇಲ್ಲಿಗೆ ಬಳಸಿಕೊಳ್ಳಬಹುದಾ? ಎಂದು ಈಗಿನ ಜನಪ್ರತಿನಿಧಿಗಳು ಚರ್ಚೆ ನಡೆಸಿ ತೀರ್ಮಾನ ಮಾಡಿ. ಗುದ್ದಲಿ ಪೂಜೆ ನಡೆಸಿದ ವೇಗವಾಗಿಯೇ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು.
ನಂತರ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪನವರು, ನಮ್ಮ ನಾಯಕರಾದ ಕೆ. ಎಸ್ ಈಶ್ವರಪ್ಪ ಅವರು ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ಪ್ರಪಂಚದ ಅತಿ ಎತ್ತರದ ಪುತ್ಥಳಿಯಾಗಲಿದೆ: ಟ್ರಸ್ಟ್ ನ ಅಧ್ಯಕ್ಷರಾದ ರಾಜಶೇಖರ್ ಅವರು ಮಾತನಾಡಿ, ಶಿವಮೊಗ್ಗದಲ್ಲಿ ನಾವು ಸ್ಥಾಪನೆ ಮಾಡಲು ಉದ್ದೇಶಿಸಿರುವ ಬಾಲಸುಬ್ರಮಣ್ಯ ಪುತ್ಥಳಿಯು ಪ್ರಪಂಚದ ಅತಿ ಎತ್ತರದ ಪುತ್ಥಳಿಯಾಗಲಿದೆ. ಇದನ್ನು ಸಿಮೆಂಟ್, ಕಬ್ಬಿಣದಿಂದ ನಿರ್ಮಾಣ ಮಾಡಲಾಗುತ್ತದೆ. ಮಲೇಷಿಯಾ, ಸೇಲಂನಲ್ಲಿ ಬಾಲಸುಬ್ರಮಣ್ಯನ ಪುತ್ಥಳಿ ಸ್ಥಾಪಿಸಿದವರಿಂದಲೇ ಇದನ್ನು ನಿರ್ಮಾಣ ಮಾಡಲಾಗುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಚನ್ನಪಟ್ಟಣದ ಗೌಡಗೆರೆಯಲ್ಲಿ ಬೃಹತ್ ಗಾತ್ರದ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪನೆ