ಶಿವಮೊಗ್ಗ : ರಾಜ್ಯದ ಎಲ್ಲಾ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸಮಿತಿಯ ಜನಗಣತಿ ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಿ ಜಾರಿಗೆ ತರಬೇಕೆಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಸಂಚಾಲಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಕೆ ಸಿದ್ದರಾಮಣ್ಣ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಎಲ್ಲಾ ಸಮುದಾಯಗಳ ಸಮೀಕ್ಷಾ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ವಿವರವಾದ ಚರ್ಚೆ ನಡೆಸಲಾಯಿತು ಎಂದರು. ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಮೂರು ವರ್ಷಗಳ ಹಿಂದೆ ಸಮೀಕ್ಷಾ ವರದಿ ತಯಾರಿಸಲಾಗಿದೆ. ವರದಿಯಲ್ಲಿ ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯದವರಲ್ಲದೇ ರಾಜ್ಯದಲ್ಲಿ ಇರುವ ಇತರೆ ಎಲ್ಲಾ ಸಮುದಾಯದವರು ಸಾಮಾಜಿಕ, ಶೈಕ್ಷಣಿಕ,ರಾಜಕೀಯ ಸೇರಿ ಸಮಗ್ರ ಮಾಹಿತಿ ಆ ವರದಿಯಲ್ಲಿದೆ ಎಂದ್ರು.
ಆದ್ದರಿಂದ ಈ ವರದಿಯನ್ನು ಮೊದಲು ಸ್ವೀಕರಿಸಬೇಕು, ನಂತರ ವರದಿಯ ಅಧ್ಯಯನ ನಡೆಸಬೇಕು, ತದನಂತರ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು. ಈ ವರದಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಅಂಶಗಳು ಒಳಗೊಂಡಿವೆ. ಇದರಲ್ಲಿ ಸರ್ಕಾರಕ್ಕೆ ಕೆಲ ಶಿಫಾರಸುಗಳನ್ನು ಸಹ ಮಾಡಲಾಗಿದೆ. ಸಮಿತಿಯು ನೀಡಿರುವ ವರದಿಯ ಆಧಾರದ ಮೇಲೆ ಸರ್ಕಾರ ಅಂಕಿ-ಅಂಶಗಳ ಅಧ್ಯಯನ ನಡೆಸಿ ಸರ್ಕಾರ ಎಲ್ಲ ಸಮುದಾಯಗಳ ಜನಗಣತಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಸ್ವೀಕರಿಸಿ ಅನುಷ್ಠಾನಗೊಳಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.