ಶಿವಮೊಗ್ಗ: ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ಹಗಲು ದರೋಡೆ ಮಾಡಿದೆ. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿಲ್ಲ. ಇದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯೇ ಸಾಕ್ಷಿ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಶಿವಮೊಗ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅಲ್ಲಗಳೆದಿಲ್ಲ. ಅಲ್ಲದೇ ಶಿಕ್ಷಕರ ನೇಮಕಾತಿ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ನಾಡಿನ ಜನತೆಗೆ ಉತ್ತರ ಕೊಡಬೇಕು. ತನಿಖೆ ನಡೆದರೆ ಎಲ್ಲಾ ಹೊರಗೆ ಬರುತ್ತದೆ. ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಹೀಗಾಗಿಯೇ ರಾಜ್ಯದ ಜನ ಅವರನ್ನು ಅಧಿಕಾರದಿಂದ ದೂರ ಇಟ್ಟಿದ್ದಾರೆ ಎಂದು ಬಿಎಸ್ವೈ ಹೇಳಿದರು.
ಪಿಎಫ್ಐ ಮೇಲೆ ಮಂಗಳವಾರ ಸುಮಾರು 40 ಕಡೆ ದಾಳಿ ಆಗಿದೆ. ಈ ದಾಳಿಯ ವೇಳೆ ಆ ಸಂಘಟನೆಯವರು ದೇಶದ್ರೋಹದಂತಹ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಇದೆಲ್ಲವನ್ನು ನೋಡಿಕೊಂಡು ಕೇಂದ್ರ ಸರ್ಕಾರ ಪಿಎಫ್ಐ ನಿಷೇಧಿಸುವ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಿಎಂ ಬೊಮ್ಮಾಯಿ ವಿರುದ್ಧ ಪೇಸಿಎಂ ಪೋಸ್ಟರ್ ಅಂಟಿಸಿದ್ದಾರೆ. ಈ ಬಗ್ಗೆ ದೂರು ಕೊಟ್ಟಿದ್ದೇವೆ. ಪ್ರತಿಪಕ್ಷದ ನಾಯಕರಾಗಿ ಈ ರೀತಿ ವರ್ತನೆ ತೋರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ: 'ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ, ಆದರೂ ಅಧಿಕಾರಕ್ಕೆ ಬರುವ ಭ್ರಮೆ': ಬಿಎಸ್ವೈ