ಶಿವಮೊಗ್ಗ: ಸಾಗರದ ಅರಣ್ಯ ಇಲಾಖೆಯ ಶ್ರೀಗಂಧ ಕೋಟಿಯ ಕಳ್ಳತನ ಹಾಗೂ ಕಾವಲುಗಾರ ನಾಗರಾಜ್ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿವೆ. ಈ ಮಧ್ಯೆ ಕೊಲೆಯಾದ ನಾಗರಾಜ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಾಗರದ ಉಪ ಅರಣ್ಯ ಇಲಾಖೆ ಮುಂಭಾಗ ಗ್ರಾಮಸ್ಥರು ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ಶಾಸಕ ಹರತಾಳು ಹಾಲಪ್ಪ ಅವರು ಮೃತ ನಾಗರಾಜರಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಸಾಗರ ಡಿಎಫ್ಓ ಮೋಹನ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಕುಟುಂಬಸ್ಥರೊಂದಿಗೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಶಾಸಕರು, ಅರಣ್ಯ ಇಲಾಖೆಯಿಂದ ಮೃತ ನಾಗರಾಜ್ ಕುಟುಂಬಕ್ಕೆ 2 ಲಕ್ಷ, ನೌಕರರ ಕ್ಷೇಮಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿ ಸೇರಿದಂತೆ ಸುಮಾರು 20 ಲಕ್ಷದಷ್ಟು ಹಣ ನೀಡಲಾಗುತ್ತದೆ ಎಂದು ತಿಳಿಸಿದರು. ಅಲ್ಲದೆ, ಅರಣ್ಯ ಕಾವಲು ಸಿಬ್ಬಂದಿಯಾಗಿದ್ದ ನಾಗರಾಜ್ ಅವರ ಕೊಲೆಯ ಆರೋಪಿಗಳನ್ನು ಬಂಧಿಸಬೇಕು ಎಂದು ಹೇಳಿದರು.
ಇನ್ನು, ತಮ್ಮ ತಂದೆಯ ಕೊಲೆ ಮಾಡಿದವರನ್ನು ಬಂಧಿಸಬೇಕು ಎಂದು ನಾಗರಾಜ್ ಪುತ್ರ ಪ್ರದೀಪ್ ಆಗ್ರಹಿಸಿದ್ದಾರೆ.