ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ನ 7ನೇ ಕ್ರಾಸ್ನಲ್ಲಿ ಐದು ವರ್ಷದ ಹೆಣ್ಣು ಮಗು ಟಿಟಿ ವಾಹನದಿಂದ ಕೆಳಗೆ ಜಾರಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗದೇ ಸುರಕ್ಷಿತವಾಗಿ ಪೊಲೀಸ್ ಠಾಣೆ ಸೇರಿದೆ.
ನಿನ್ನೆ ರಾತ್ರಿ (ಜ.30) ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ರಸ್ತೆಯಲ್ಲಿ ಟಿ.ಟಿ ವಾಹನದಿಂದ ಐದು ವರ್ಷದ ಹೆಣ್ಣು ಮಗುವೊಂದು ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಕಾರು ಚಾಲಕ ತಕ್ಷಣ ಮಗುವನ್ನು ಕರೆದುಕೊಂಡು ಸಮೀಪದ ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆಗುಂಬೆ ಠಾಣೆ ಪೊಲೀಸರು ಮಗುವಿನ ವಿಳಾಸ, ಪೋಷಕರ ಹೆಸರು ಕೇಳಿದ್ದಾರೆ. ಆದರೆ ಗಾಬರಿಗೊಂಡ ಮಗು ಯಾವುದಕ್ಕೂ ಉತ್ತರಿಸಿರಲಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮೂಲದ ಬೀನು ಎಂಬುವವರು ಕುಟುಂಬ ಸಮೇತ ಕೇರಳ, ತಮಿಳುನಾಡಿಗೆ ಪ್ರವಾಸ ಹೋಗಿದ್ದರು. ಪ್ರವಾಸದಿಂದ ವಾಪಾಸ್ ಬರುವಾಗ ರಾತ್ರಿಯಾಗಿದ್ದರಿಂದ ಪೋಷಕರು ನಿದ್ರೆಗೆ ಜಾರಿದ್ದರು. ಜೊತೆಗೆ ವಾಹನದ ಹಿಂದಿನ ಬಾಗಿಲು ಲಾಕ್ ಆಗಿರದ ಕಾರಣ ಮಗು ತಿರುವಿನಲ್ಲಿ ಪೋಷಕರ ಕೈ ತಪ್ಪಿ ಕೆಳಗೆ ಬಿದ್ದಿದೆ. ಮುಂದೆ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡ ಪೋಷಕರು ಮಗು ಇಲ್ಲದಿರುವುದನ್ನು ಗಮನಿಸಿ, ತಕ್ಷಣ ವಾಪಾಸ್ ಅದೇ ಮಾರ್ಗವಾಗಿ ಹುಡುಕುತ್ತ ಬಂದಿದ್ದಾರೆ.
ಈ ವೇಳೆ ಮಗು ಠಾಣೆಯಲ್ಲಿ ಇರುವ ವಿಷಯ ಗೊತ್ತಾಗಿದ್ದು, ತಕ್ಷಣ ಠಾಣೆಗೆ ತೆರಳಿದ್ದಾರೆ. ಪೊಲೀಸರು ತಂದೆ ತಾಯಿಗೆ ಎಚ್ಚರಿಕೆ ನೀಡಿ ಮಗುವನ್ನು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.