ಶಿವಮೊಗ್ಗ : ವೀಕೆಂಡ್ ಕರ್ಪ್ಯೂ ಹಿನ್ನೆಲೆ ಮಾಸ್ಕ್ ಹಾಕದಿರುವವರಿಗೆ ಫೈನ್ ಹಾಕಲು ಬಂದ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಗರದ ಗಾಂಧಿ ಬಜಾರ್‌ನಲ್ಲಿ ನಡೆದಿದೆ.
ಮಾಸ್ಕ್ ಹಾಕದೇ ಇದ್ದವರಿಗೆ ಪಾಲಿಕೆ ಅಧಿಕಾರಿಗಳು ದಂಡ ಹಾಕುತ್ತಿದ್ದರು. ಈ ಸಮಯದಲ್ಲಿ ಒಗ್ಗೂಡಿದ ಸಾರ್ವಜನಿಕರು, ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ಹೆದರಿ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಮಹಾನಗರ ಪಾಲಿಕೆ ಮೇಯರ್ಗೆ ಕೊರೊನಾ ಬಂದಾಗ ಇಡೀ ಊರಿನ ತುಂಬಾ ಓಡಾಡಿದ್ದರು. ಅವರ ಮೇಲೆ ಯಾವ ಕ್ರಮಕೈಗೊಂಡಿದ್ದೀರಿ. ಈಗ ಬಂದು ಜನಸಾಮಾನ್ಯರಿಗ ದಂಡ ಹಾಕುತ್ತಿದ್ದೀರಿ ಎಂದು ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡರು. ಜನರ ಪ್ರಶ್ನೆಗೆ ಉತ್ತರಿಸಲು ಹೆದರಿದ ಅಧಿಕಾರಿಗಳು, ಅಲ್ಲಿಂದ ಜಾಗ ಖಾಲಿ ಮಾಡಿದರು.
ಕೊರೊನಾ ಹಾಗೂ ಒಮಿಕ್ರಾನ್ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಹಾಗಾಗಿ, ಸರ್ಕಾರದ ಆದೇಶವನ್ನು ಶಿವಮೊಗ್ಗದಲ್ಲಿ ಸಹ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಅಗತ್ಯ ವಸ್ತುಗಳಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ-ಮುಗ್ಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿಸಲಾಗಿದೆ.
ಬಸ್ ನಿಲ್ದಾಣ ಖಾಲಿ ಖಾಲಿ : ವೀಕೆಂಡ್ ಕರ್ಫ್ಯೂ ಜಾರಿ ಇರುವ ಹಿನ್ನೆಲೆ ಬಸ್ಗಳ ಓಡಾಟವು ವಿರಳವಾಗಿದೆ. ಹಾಗಾಗಿ, ನಗರ ಖಾಸಗಿ ಬಸ್ ನಿಲ್ದಾಣ ಹಾಗೂ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣಗಳು ಖಾಲಿ ಖಾಲಿ ಆಗಿವೆ. ಇನ್ನೂ ಸರಿಯಾದ ಸಮಯಕ್ಕೆ ಬಸ್ ಸಿಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಅನಗತ್ಯ ವಾಹನ ಸಂಚಾರ ಮಾಡುವವರಿಗೆ ಶಾಕ್ : ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಹಾಗಾಗಿ, ತುರ್ತು ಸೇವೆ ಹೊರತು ಪಡಿಸಿ ಉಳಿದ ಅನಗತ್ಯ ಸಂಚಾರಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಅನಗತ್ಯ ಓಡಾಡುವವರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಶಾಕ್ ನೀಡಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ. ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂಗೆ ಎರಡನೇ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.