ಶಿವಮೊಗ್ಗ: ಸಹಕಾರಿ ಸಂಸ್ಥೆಗಳಿಂದ ರೈತರು ಪಡೆದ ಸಾಲವನ್ನು ಬಲವಂತವಾಗಿ ವಸೂಲಿ ಮಾಡಲು ಸರ್ಕಾರ ಆದೇಶ ನೀಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಸತತ ಬರಗಾಲ ಆವರಿಸಿದೆ. ಇನ್ನೊಂದೆಡೆ ಅತಿವೃಷ್ಠಿಯಿಂದ ರೈತರು ಮನೆ- ಮಠ ಕಳೆದುಕೊಂಡಿದ್ದು, ಬೆಳೆ ನಾಶವಾಗಿ ಜಮೀನುಗಳೆಲ್ಲಾ ಕೊಚ್ಚಿ ಹೋಗಿವೆ. ಇದುವರೆಗೂ ಸರ್ಕಾರ ಯಾವುದೇ ನಷ್ಟ ಪರಿಹಾರ ಭರಿಸಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಸರ್ಕಾರ ಆದೇಶ ನೀಡಿರುವುದು ಖಂಡನೀಯ ಎಂದರು.
ರೈತರ ಟ್ರ್ಯಾಕ್ಟರ್, ಪವರ ಟಿಲ್ಲರ್ ಜಪ್ತಿ ಮಾಡಿದರೆ ರೈತ ಸಂಘದಿಂದ ಮರು ಜಪ್ತಿ ಮಾಡಿ ರೈತರಿಗೆ ವಾಹನಗಳನ್ನು ವಾಪಸ್ ಕೊಡಬೇಕಾಗುತ್ತದೆ. ತಕ್ಷಣವೇ ಸಾಲ ವಸೂಲಿ ಸುತ್ತೋಲೆಯನ್ನು ಹಿಂಪಡೆದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.