ಶಿವಮೊಗ್ಗ: ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತಕ್ಷಣ ತೆರೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಹೆಚ್ .ಆರ್. ಬಸವರಾಜಪ್ಪ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ7 ಸಾವಿರ ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಬೆಳೆದಿದ್ದು, 3 ಲಕ್ಷಕ್ಕೂ ಹೆಚ್ಚು ಕ್ವಿಂಟಲ್ ಮೆಕ್ಕೆಜೋಳ ಉತ್ಪಾದನೆಯಾಗಿದೆ. ಆದರೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆಕ್ಕೆಜೋಳ ದರ ಈಗ ₹1000ಕ್ಕೆ ಇಳಿದಿದ್ದು, ರೈತರು ಕಂಗಾಲಾಗಿದ್ದಾರೆ. ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ವನ್ನು ತೆರೆದು ಕ್ವಿಂಟಾಲ್ ₹3000 ರಂತೆ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭತ್ತಕ್ಕೂ ಬೆಂಬಲ ಬೆಲೆ ನೀಡಬೇಕು ಹಾಗೂ ಒಬ್ಬ ರೈತನಿಂದ 40 ಕ್ವಿಂಟಲ್ ಮಾತ್ರ ಖರೀದಿ ಮಾಡುವ ಷರತ್ತನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ 2022ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದೆ.
ರೈತರಿಗೆ ನ್ಯಾಯಯುತ ಬೆಲೆ ಕೂಟ್ಟಿಲ್ಲ. ಕಂಪನಿಗಳ ಪರವಾಗಿರುವ ಬೆಳೆ ವಿಮೆಯನ್ನು ರೈತರ ಪರವಾಗಿ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡದೇ, ಅತಿವೃಷ್ಠಿ ಅನಾವೃಷ್ಠಿಗೆ ಸರಿಯಾದ ಪರಿಹಾರ ನೀಡಿಲ್ಲ. ರಸಗೊಬ್ಬರ ಕೀಟನಾಶಕಗಳಿಗೆ ಬೆಲೆ ಕಡಿಮೆ ಮಾಡದೇ, ನೀರಾವರಿ ಯೋಜನೆಗಳಿಗೆ ಹಣ ನೀಡದೇ, ರೈತರ ಆದಾಯ ದ್ವಿಗುಣ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದರು. ಹಾಗಾಗಿ ಕೂಡಲೇ ರೈತರಿಂದ ಮಕ್ಕೆಜೋಳ ಖರೀದಿ ಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.