ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ನಡೆಸುತ್ತಿದ್ದಾರೆ. ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತ ಸಂಘಟನೆಗಳು ಈ ಹೋರಾಟವನ್ನು ದೇಶಾದ್ಯಂತ ವಿಸ್ತರಿಸಲು ಮುಂದಾಗಿವೆ.
ಈ ನಿಟ್ಟಿನಲ್ಲಿ ದೆಹಲಿ, ಪಂಜಾಬ್ ಮಾತ್ರವಲ್ಲದೇ ದಕ್ಷಿಣ ಭಾರತದ ರಾಜ್ಯಗಳಲ್ಲೂ ಹೋರಾಟ ಆರಂಭಿಸಲು ಪ್ಲಾನ್ ರೂಪಿಸಿವೆ. ಬಿಜೆಪಿ ಶಕ್ತಿಕೇಂದ್ರ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮೊದಲ ರೈತ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಭರದ ಸಿದ್ಧತೆಯೂ ನಡೆದಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರೈತರ ಸಭೆ ನಡೆಸಿ ಜೊತೆಗೆ ಬಿಜೆಪಿಯೇತರ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ, ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
ಇದನ್ನೂ ಓದಿ:ಸಿಎಂ ತವರು ಜಿಲ್ಲೆಯ ನಗರಸಭೆಗಳಲ್ಲಿ ನೌಕರರ ಕೊರತೆ: ಕೆಲಸವಾಗದೆ ಜನರ ಪರದಾಟ
ರಾಕೇಶ್ ಟಿಕಾಯತ್, ದಶರ್ನ್ ಪಾಲ್, ಯದ್ವೀರ್ ಸಿಂಗ್, ಯೋಗೇಂದ್ರ ಯಾದವ್ ಸಮಾವೇಶದಲ್ಲಿ ಭಾಗಿಯಾಗಿ, ದಕ್ಷಿಣ ಭಾರತದ ಹೋರಾಟಕ್ಕೆ ಮುನ್ನುಡಿ ಬರೆಯಲಿದ್ದಾರೆ. ಶಿವಮೊಗ್ಗದ ರೈತರ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಈಗಾಗಲೇ ಬೆಂಬಲ ಘೋಷಿಸಿವೆ.