ಶಿವಮೊಗ್ಗ: ನಗರದ ಬಿ.ಹೆಚ್.ರಸ್ತೆಯ ಮಿಲಿಟರಿ ಕ್ಯಾಂಟಿನ್ನಲ್ಲಿ ಇಂದು ಮಾಜಿ ಸೈನಿಕರು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮಿಲಿಟರಿಯಿಂದ ಮಾಜಿ ಸೈನಿಕರಿಗೆ ಮದ್ಯ ಸರಬರಾಜು ಮಾಡಿರಲಿಲ್ಲ. ಕಳೆದ ಎರಡು ದಿನಗಳಿಂದ ಮತ್ತೆ ಮದ್ಯವನ್ನು ನೀಡಲಾಗುತ್ತಿದೆ. ಆದರೆ, ಇಂದು ಏಕಾಏಕಿ ಅಬಕಾರಿ ಇಲಾಖೆಯ ಇನ್ಸ್ ಪೆಕ್ಟರ್ಗಳು ಬಂದು ಕ್ಯಾಂಟೀನ್ನಲ್ಲಿ ಮದ್ಯವನ್ನು ಮಾರಾಟ ಮಾಡಬೇಡಿ ಎಂದು ತಿಳಿಸಿದ್ದಾರೆ.
ಈ ಕಾರಣಕ್ಕಾಗಿ ಕ್ಯಾಂಟೀನ್ ಬಂದ್ ಮಾಡಲಾಗಿದ್ದು, ಮಾಜಿ ಸೈನಿಕರು ಕೆರಳಿದ್ದರು. ನಾವು ದೇಶದ ಅಪಾಯಕಾರಿ ಗಡಿಯನ್ನು ಕನಿಷ್ಠ ಡಿಗ್ರಿ ಚಳಿಯಲ್ಲಿ ಕಾದು ಬಂದಿದ್ದೆವೆ. ಇಲ್ಲಿ ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದರು.
ಈ ವೇಳೆ, ಕ್ಯಾಂಟೀನ್ ಬಳಿ ಬಂದ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಮಾಜಿ ಸೈನಿಕರು ತೀವ್ರ ತರಾಟೆಗೆ ತೆಗೆದು ಕೊಂಡರು. ಬ್ಲಾಕ್ ಡಾಗ್ ಹಾಗೂ ಐಬಿ ಎಂಬ ಮದ್ಯದ ಬಾಟಲಿಯ ಮೇಲೆ ರಾಜ್ಯ ಅಬಕಾರಿ ಇಲಾಖೆಯ ಸ್ಟೀಕರ್ ಇರಲಿಲ್ಲ. ಇದರಿಂದ ಅನುಮಾನಗೊಂಡ ಅಬಕಾರಿ ಇಲಾಖೆಯವರು ಎರಡು ಮದ್ಯವನ್ನು ಮಾರಾಟ ಮಾಡದಂತೆ ತಿಳಿಸಿದ್ದರು.
ಅಬಕಾರಿ ಅಧಿಕಾರಿಗಳು ಬಂದು ಬಾಕ್ಸ್ ಗಳನ್ನು ಪರಿಶೀಲನೆ ನಡೆಸಿದರು. ಮದ್ಯದ ಬಾಟಲಿಗಳು ಸೈನಿಕರಿಗೆ ಅಂತಾನೇ ತಯಾರು ಮಾಡಿದ್ದಾರೆ. ಅದು ಸರ್ಕಾರಿ ಡಿಸ್ಟಲರಿಯಲ್ಲಿಯೇ ತಯಾರು ಮಾಡಲಾಗಿದೆ. ಈ ಮದ್ಯವು ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ ಅಲ್ಲಿಂದ ಶಿವಮೊಗ್ಗಕ್ಕೆ ಬಂದಿದೆ.
ಮದ್ಯವು ಇಷ್ಟೆಲ್ಲ ಸುತ್ತಾಡಿ ಬಂದ ಮೇಲಾದ್ರೂ ಅಬಕಾರಿ ಅಧಿಕಾರಿಗಳು ಲಾರಿ ಲೋಡ್ ಬಂದಾಗ ಪರಿಶೀಲನೆ ನಡೆಸದೇ, ಈಗ ಬಂದು ಮದ್ಯ ಮಾರಾಟ ಮಾಡಬೇಡಿ ಎಂದರೆ ಅದು ಎಷ್ಟು ಸರಿ ಎಂದು ಮಾಜಿ ಸೈನಿಕರು ಪ್ರಶ್ನೆ ಮಾಡಿದರು.