ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಈ ಕುರಿತು ಗಮನ ಹರಿಸದೆ ಕೇವಲ ಸಭೆಗಳಿಗೆ ಮೀಸಲಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆ ಹಾಗೂ ಗಾಜನೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಬಿಸಿ ನೀರು ಸಹ ನೀಡುತ್ತಿಲ್ಲ ಎಂದು ಕರೆ ಮಾಡಿ ತಿಳಿಸುತ್ತಿದ್ದಾರೆ. ಹಾಗಾಗಿ ಸಚಿವರಾದ ಈಶ್ವರಪ್ಪನವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಗಟ್ಟಿ ಧ್ವನಿಯಲ್ಲಿಯೇ ಮಾತನಾಡಿದ್ದೇನೆ ಎಂದರು.
ಶಿವಮೊಗ್ಗ ನಗರದ ಅಭಿವೃದ್ಧಿಗೆ ಬಂದ ಹಣ ಮಹಾನಗರ ಪಾಲಿಕೆಯಿಂದ ವಾಪಸ್ ಹೋಗುತ್ತಿದೆ. ಸ್ಮಾರ್ಟ್ ಸಿಟಿ ಹೊರತುಪಡಿಸಿ ಉಳಿದ ವಾರ್ಡ್ಗಳ ಅಭಿವೃದ್ಧಿಗೆ ಹಣ ಬಳಕೆಯಾಗದೆ, ವಾಪಸ್ ಹೋಗಿದೆ. ಹಾಗಾಗಿ ಪ್ರಭಾವಿ ಸಚಿವರಾಗಿರುವ ಈಶ್ವರಪ್ಪನವರು ಆ ಹಣವನ್ನು ವಾಪಸ್ ತರಿಸಿ ನಗರದ ಅಭಿವೃದ್ಧಿಗೆ ಶಕ್ತಿ ನೀಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪನವರು, ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಗಾಳಿಯಲ್ಲಿ ಗುಂಡು ಹೊಡೆಯುವ ಅಭ್ಯಾಸ ಇಲ್ಲ. ಈ ಅಭ್ಯಾಸ ಇರೋದು ಈಶ್ವರಪ್ಪನವರಿಗೆ ಎಂದು ಪ್ರಸನ್ನ ಕುಮಾರ್ ತೀರಗೇಟು ನೀಡಿದ್ದಾರೆ.