ಶಿವಮೊಗ್ಗ: ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರಿಗೆ ಬೇಕಾದ ಸಹಾಯವನ್ನು ಶೀಘ್ರವಾಗಿ ನೀಡುವ ERSS (Emergency Response Support System) 112 ಸೇವೆಗೆ ಶಿವಮೊಗ್ಗದಲ್ಲಿ ಪೂರ್ವ ವಲಯ ಐಜಿಪಿ ಎಸ್.ರವಿ ಅವರು ಎಸ್ಪಿ ಕಚೇರಿಯಲ್ಲಿ ಚಾಲನೆ ನೀಡಿದರು.
ಈ ತುರ್ತು 112 ಸೇವೆಗಾಗಿಯೇ ಶಿವಮೊಗ್ಗ ಜಿಲ್ಲೆಯಲ್ಲಿ 18 ವಾಹನಗಳನ್ನು ನೀಡಲಾಗಿದೆ. ಶಿವಮೊಗ್ಗ ಉಪ ವಿಭಾಗಕ್ಕೆ 6, ಉಳಿದ ಉಪ ವಿಭಾಗಕ್ಕೆ ತಲಾ ಮೂರು ವಾಹನಗಳನ್ನು ನೀಡಲಾಗಿದೆ. ಈ ವಾಹನದಲ್ಲಿ ಚಾಲಕ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿ ಇರುತ್ತಾರೆ. ತುರ್ತು ಪರಿಸ್ಥಿತಿಗಳಾದ ಅಪಘಾತ, ಕಳ್ಳತನ, ಬೆಂಕಿ ಅವಘಡಗಳು ಸಂಭವಿಸಿದಾಗ 112ಕ್ಕೆ ಕರೆ ಮಾಡಿದರೆ, ಕ್ಷಣ ಮಾತ್ರದಲ್ಲಿ ನಿಮ್ಮ ಬಳಿ ವಾಹನ ಬರಲಿದೆ.
ಈ ಸೇವೆಯು ಒಂದು ರೀತಿ ಪೊಲೀಸ್ ಉಪ ಠಾಣೆಯಂತೆ ಕಾರ್ಯ ನಿರ್ವಹಿಸಲಿದೆ. ಹಿಂದೆ ಪೊಲೀಸ್ ಉಪ ಠಾಣೆಯಲ್ಲಿ ಸಿಬ್ಬಂದಿಗಳಿರಬೇಕಿತ್ತು. ಅವರು ಅಲ್ಲಿಯೇ ಇದ್ದು ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಈಗ ಕರೆ ಬಂದ ಕಡೆ ಯಾವ ವಾಹನ ಹತ್ತಿರದಲ್ಲಿ ಇರುತ್ತದೆಯೋ ಆ ವಾಹನ ಅಲ್ಲಿಗೆ ತೆರಳುತ್ತದೆ. ಸಾರ್ವಜನಿಕರು ಈ 112 ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪೂರ್ವ ವಲಯ ಐಜಿಪಿ ಎಸ್.ರವಿ ಮನವಿ ಮಾಡಿದ್ದಾರೆ.