ಶಿವಮೊಗ್ಗ: ಮರಿಹಾಕಿದ ಆನೆಯ ಆರೈಕೆ ಮಾಡುತ್ತಿದ್ದ ವನ್ಯಜೀವಿ ವೈದ್ಯಾಧಿಕಾರಿ ಡಾ. ವಿನಯ್ ಮೇಲೆ ನೀಲಾಂಬರಿ ಎಂಬ ಆನೆ ಸೊಂಡಿಲಿನಿಂದ ಮೇಲೆತ್ತಿ ನೆಲಕ್ಕೆ ಹಾಕಿ ಕಾಲಿನಲ್ಲಿ ತುಳಿಯಲು ಮುಂದಾಗಿದೆ. ಆದರೆ ಅದೃಷ್ಟವಶಾತ್ ಡಾ. ವಿನಯ್ ಪ್ರಾಣಾಪಾಯದರಿಂದ ಪಾರಾಗಿದ್ದಾರೆ.
ಇಂದು ಡಾ. ವಿನಯ್ ಎಂದಿನಂತೆ ಆನೆ ಬಿಡಾರಕ್ಕೆ ಹೋಗಿದ್ದರು. ಇತ್ತೀಚೆಗೆ ಮರಿ ಹಾಕಿದ್ದ ಭಾನಮತಿ ಎಂಬ ಆನೆಯ ಆರೈಕೆ ಮಾಡುವಾಗ ಪಕ್ಕದಲ್ಲಿಯೇ ಇದ್ದ ನೀಲಾಂಬರಿ ಆನೆಯು ವೈದ್ಯರನ್ನು ಸೊಂಡಿಲಿನಲ್ಲಿ ಮೇಲಕ್ಕೆ ಎತ್ತಿ, ನೆಲಕ್ಕೆ ಹಾಕಿ ತನ್ನ ಮುಖದಿಂದ ಒತ್ತಲು ಮುಂದಾಗಿದೆ. ನಂತರ ತನ್ನ ಎಡಗಾಲನ್ನು ಎತ್ತಿ ತುಳಿಯಲು ಮುಂದಾಗಿದೆ. ಅಷ್ಟರಲ್ಲಿ ಡಾ. ವಿನಯ್ ತಪ್ಪಿಸಿಕೊಂಡಿದ್ದು, ಅವರ ಕಾಲಿಗೆ ಗಾಯವಾಗಿದೆ.
ತಕ್ಷಣ ಅರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆದೊಯ್ದು, ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗಿದೆ. ಸದ್ಯ ಕಾಲಿಗೆ ಯಾವುದೇ ತೀವ್ರ ಅಪಾಯವಾಗಿಲ್ಲ, ಬಲಗಾಲಿನ ಒಳಭಾಗದಲ್ಲಿ ಸಣ್ಣ ಗಾಯವಾಗಿದೆ. ಆನೆ ನೆಲಕ್ಕೆ ಹಾಕಿದ ಪರಿಣಾಮ ಮೈ-ಕೈ ನೋವಾಗಿದೆ. ಸದ್ಯ ನಾನು ಸೇಫ್ ಆಗಿದ್ದೇನೆ ಎಂದು ಡಾ. ವಿನಯ್ 'ಈಟಿವಿ ಭಾರತ'ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲು ಹಿಡಿದು ಕಾವಲು ಕಾಯುತ್ತಿದ್ದ ನೇಪಾಳಿ ಗೂರ್ಖಾ ಮಲಗಿದ್ದಲ್ಲೇ ಸಾವು
ನೀಲಾಂಬರಿ ಆನೆಯು ಮಾವುತ ತನ್ನ ಬಳಿ ಇಲ್ಲದೆ ಹೋದ್ರೆ ಈ ರೀತಿ ಕೋಪದಿಂದ ವರ್ತಿಸುತ್ತದೆಯಂತೆ. ಕಳೆದ ಮೂರು ದಿನಗಳ ಹಿಂದಷ್ಟೇ ಸಕ್ರೆಬೈಲಿನ ಮಾವುತನ ಮೇಲೂ ಸಹ ನೀಲಾಂಬರಿ ದಾಳಿ ನಡೆಸಿತ್ತು. ನೀಲಾಂಬರಿ ಆನೆ ಚಿತ್ರದುರ್ಗದ ಮುರುಘಾ ಮಠದ ಆನೆಯಾಗಿದ್ದು, ಸಂತಾನಾಭಿವೃದ್ಧಿಗೆ ಚಿತ್ರದುರ್ಗದಿಂದ ಸಕ್ರೆಬೈಲಿಗೆ ಕರೆ ತರಲಾಗಿದೆ.