ಶಿವಮೊಗ್ಗ: ಇಂದು ಎಲ್ಲ ಕಡೆಯಲ್ಲೂ ಉತ್ತಮ ಮತದಾನವಾಗಿದೆ. 14 ಕ್ಷೇತ್ರಗಳಲ್ಲಿ ಮತದಾನವಾಗಿದ್ದು, 11 ಕ್ಕಿಂತ ಹೆಚ್ಚು ಕಡೆಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ಮುಗಿಸಿ ಜಿಲ್ಲೆಗೆ ಆಗಮಿಸಿದ ಅವರು, ಮೊದಲ ಹಂತದ ಚುನಾವಣೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು. ಮಂಡ್ಯದಲ್ಲಿ ಸುಮಲತಾ ಅವರು ನ್ಯಾಯಯುತವಾಗಿ ಚುನಾವಣೆ ನಡೆದಿಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ಎಸ್.ವೈ, ಹೌದು. ಮಂಡ್ಯದಲ್ಲಿ ಗೂಂಡಾಗಿರಿ, ಹಣ, ಹೆಂಡ ಹಂಚಿ ಚುನಾವಣೆ ಮಾಡಿದ್ದಾರೆ, ಇದರ ಫಲಿತಾಂಶ ಮುಂದೆ ತಿಳಿಯಲಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಮಾತನಾಡಿ, 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆದಿದೆ. ಉತ್ತಮ ಮತದಾನವಾಗಿರುವುದು ಸಂತೋಷ. ಬಿಜೆಪಿಯ ಪರವಾಗಿ ವಿಶೇಷವಾಗಿ ವಿದ್ಯಾವಂತರು, ತಿಳುವಳಿಯುಳ್ಳವರು ಅತಿಹೆಚ್ಚು ಮತದಾನ ಮಾಡಿರುವುದು ಭಾರತೀಯ ಜನತಾ ಪಾರ್ಟಿಗೆ ಲಾಭ ಆಗುತ್ತದೆ. 14 ರಲ್ಲಿ 10 -12 ಸೀಟು ಗೆಲ್ಲುತ್ತೇವೆ ಎಂದರು.
ಬಿಎಸ್ವೈ ಬ್ಯಾಗ್ ಮತ್ತು ಹೆಲಿಕಾಪ್ಟರ್ ತಪಾಸಣೆ
ಚುನಾವಣಾ ಪ್ರಚಾರ ಮುಗಿಸಿ ಹೆಲಿಕಾಪ್ಟರ್ ಮೂಲಕ ನಗರಕ್ಕೆ ಆಗಮಿಸಿದ ಯಡಿಯೂರಪ್ಪ ಅವರ ಬ್ಯಾಗ್ ಮತ್ತು ಹೆಲಿಕಾಪ್ಟರ್ನ್ನ ಚುನಾವಣಾ ಅಧಿಕಾರಿಗಳು ತಪಾಸಣೆ ಮಾಡಿದರು.