ಶಿವಮೊಗ್ಗ: ಸೊರಬದ ತುಡಿನೀರು ಗ್ರಾಮದ ಪೊದೆಯಲ್ಲಿ ಸಲೀಂ ಎಂಬ ಯುವಕನ ಶವ ಸಿಕ್ಕಿರುವ ಪ್ರಕರಣ ತಿರುವು ಪಡೆದು ಕೊಂಡಿದೆ. ಆತನನ್ನು ಅಣ್ಣನೇ ಕೊಂದು ಹಾಕಿರುವ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಡಿಸೆಂಬರ್ 12 ರಂದು 25 ವರ್ಷದ ಸಲೀಂ ಎಂಬಾತನ ಶವ ಗ್ರಾಮದ ಕೆರೆ ಪಕ್ಕದ ಪೊದೆಯಲ್ಲಿ ಪತ್ತೆಯಾಗಿತ್ತು. ತಲೆ ಮತ್ತು ಎಡಗಾಲಿನ ಮೇಲೆ ಆಯುಧದಿಂದ ಹಲ್ಲೆ ನಡೆಸಿದ್ದು ಗೊತ್ತಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಆನವಟ್ಟಿ ಪೊಲೀಸರು ತನಿಖೆ ನಡೆಸಿ ಸಲೀಂನ ಸಹೋದರ ರಫೀಕ್(35) ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆತ, ತಾನು ತುಡಿನೀರು ಗ್ರಾಮದ ಸಂತೋಷ್(24) ಎಂಬಾತನ ಜೊತೆ ಸೇರಿ ಸಲೀಂನನ್ನು ಕೊಂದಿದ್ದು, ಯಾರಿಗೂ ಅನುಮಾನ ಬಾರದ ರೀತಿ ಚಾಪೆಯಲ್ಲಿ ಸುತ್ತಿ ಶವ ಬಿಸಾಡಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ.
ಕಾಣೆಯಾಗಿದ್ದಾನೆ ಎಂದು ದೂರು: ಕೊಲೆಯಾದ ಸಲೀಂನಿಗೆ ರಫೀಕ್ ಹಾಗೂ ಇನಾಯತ್ ಎಂಬ ಇಬ್ಬರು ಸಹೋದರರಾಗಿದ್ದಾರೆ. ಸಲೀಂ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಎಂದು ಡಿ.18ರಂದು ಇನಾಯತ್ ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಮೂರು ದಿನಗಳ ಹಿಂದೆ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದವ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿ ಹುಡುಕಾಟ ನಡೆಸಿದ ಪೋಷಕರು, ಸಂಬಂಧಿಕರು ನಂತರ ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶವವಾಗಿ ಪತ್ತೆ: ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮಾಡಿದಾಗ ಡಿ.18 ರಂದು ಸಲೀಂ ಶವ ಗ್ರಾಮದ ಕೆರೆ ಸಮೀಪದ ಪೊದೆಯಲ್ಲಿ ಪತ್ತೆಯಾಗಿತ್ತು. ಶವದ ಮೇಲಿದ್ದ ಗಾಯದ ಗುರುತುಗಳನ್ನು ಕಂಡು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕುಟುಂಬಸ್ಥರು ದೂರು ನೀಡಿದ್ದರು.
ಅಣ್ಣನೇ ಕೊಲೆಗಾರ: ಸೊರಬ ಪಿಎಸ್ಐ ರಾಜಶೇಖರ್ ಹಾಗೂ ತಂಡ ತನಿಖೆ ನಡೆಸಿದಾಗ ಸಲೀಂನ ಕೊಲೆಯನ್ನು ಆತನ ಹಿರಿಯ ಅಣ್ಣ ರಫೀಕ್ ಮಾಡಿರುವುದು ತಿಳಿದು ಬಂದಿದೆ. ಸಲೀಂ ತನ್ನೊಂದಿಗೆ ಜಮೀನಿನ ವಿಚಾರವಾಗಿ ಆಗಾಗ ಗಲಾಟೆ ಮಾಡುತ್ತಿದ್ದ. ಅಲ್ಲದೆ, ತಾನು ಮನೆಯಲ್ಲಿ ಇಲ್ಲದ ವೇಳೆ ತನ್ನ ಹೆಂಡತಿ ಮೇಲೆ ಕಣ್ಣು ಹಾಕಿದ್ದಾನೆ. ಹೀಗಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣವನ್ನು ತೀವ್ರಗತಿಯಲ್ಲಿ ಬಗೆಹರಿಸಿದ ತಂಡವನ್ನು ಎಸ್ಪಿ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಎರಡು ಪ್ರತ್ಯೇಕ ಪ್ರಕರಣ: ಶಿವಮೊಗ್ಗದಲ್ಲಿ ಪುರುಷ , ಮಹಿಳೆ ಕೊಲೆ