ಶಿವಮೊಗ್ಗ: 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಅಂಗಾವಗಿ ಜಿಲ್ಲೆಯಲ್ಲಿ ಒಂದು ಸಾವಿರ ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಏಕತಾ ಚಲೋ ಮೆರವಣಿಗೆ ನಡೆಸಲಾಯಿತು.
ಜೆಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ ಸಿಮ್ಸ್ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಏಕತಾ ಚಲೋ ಮೆರವಣಿಗೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಹಾಗು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭಾಗವಹಿಸಿ, ಪಾರಿವಾಳ ಹಾರಿ ಬಿಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ದೇಶದ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರಧ್ವಜದ ಮೂಲಕ ಏಕತಾ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಏಕತಾ ಚಲೋ ಮೆರವಣಿಗೆಗೆ ಜೆಸಿಐ ಶಿವಮೊಗ್ಗ ಮಲ್ನಾಡ್ ಕಳೆದ ಎರಡು ತಿಂಗಳ ಕಾಲ ತಯಾರಿ ನಡೆಸಿದ್ದು, ರಾಷ್ಟ್ರಧ್ವಜದ ನಿರ್ಮಾಣಕ್ಕಾಗಿ ನಗರದ 8 ಶಾಲೆಗಳ ವಿದ್ಯಾರ್ಥಿಗಳನ್ನು ಬಳಸಿಕೊಂಡಿದೆ. ಮೆರವಣಿಗೆಯಲ್ಲಿ 800ಕ್ಕೂ ಹೆಚ್ಚು ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಿಮ್ಸ್ ಮುಂಭಾಗದಿಂದ ಆರಂಭವಾದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜ ಹಿಡಿದ ವಿದ್ಯಾರ್ಥಿಗಳು, ದೇಶ ಭಕ್ತಿಯ ಹಾಡುಗಳನ್ನು ಹಾಡುತ್ತ, ಭಾರತ್ ಮಾತಾಕಿ ಜೈ ಎನ್ನುವ ಘೋಷಣೆಗಳನ್ನು ಹಾಕುತ್ತ ನಗರದ ಪ್ರಮುಖ ರಸ್ತೆಗಳ ಮುಖಾಂತರ ಎನ್ಇಎಸ್ ಮೈದಾನವನ್ನು ತಲುಪಿದರು.
ಇದನ್ನೂ ಓದಿ: ಲಿಮ್ಕಾ ದಾಖಲೆ ಬರೆದ 13 ಸಾವಿರ ಮೀಟರ್ ಬಟ್ಟೆಯಲ್ಲಿ ತಯಾರಾದ ರಾಷ್ಟ್ರಧ್ವಜ