ಶಿವಮೊಗ್ಗ: ಹುಣಸೋಡು ಗ್ರಾಮದ ಕ್ರಷರ್ ಬಳಿ ನಡೆದ ಸ್ಫೋಟ ಪ್ರಕರಣದ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮಾಂತರ ಶಾಸಕರು ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಶಿವಮೊಗ್ಗದ ಅಬ್ಬಲಗೆರೆ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದಿಂದ ಅಮಾಯಕರ ಜೀವ ಬಲಿಯಾಗುತ್ತಿದೆ. ಅಕ್ರಮವಾಗಿ ಕಲ್ಲು ಕ್ವಾರಿಗಳು ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ. ಅಕ್ರಮ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದರೂ ಯಾವುದೇ ದಾಳಿ ನಡೆಸದೇ, ಅವರ ಜೊತೆ ಸೇರಿ ಬಿಜೆಪಿಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮಾಂತರ ಶಾಸಕರು ದಂಧೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪರಿಸರ ಹಾಳು ಮಾಡುವಂತಹ ದಂಧೆಗೆ ಬ್ರೇಕ್ ಹಾಕಬೇಕಾದವರೆ ಕೈ ಕಟ್ಟಿ ಕುಳಿತುಕೊಂಡು ಪರಿಸರ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ- ಸವಳಂಗ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ರಸ್ತೆ ತಡೆ ನಡೆಸದೆ ಪಕ್ಕದಲ್ಲಿ ಹಾಕಿರುವ ಶಾಮಿಯಾನದಲ್ಲಿ ಪ್ರತಿಭಟನೆ ನಡೆಸುವಂತೆ ಮನವೊಲಿಸಲು ಯತ್ನ ಮಾಡಿದರೂ, ಅದು ವಿಫಲವಾಯಿತು.
ನಂತರ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ರವಿಕುಮಾರ್, ಡಾ.ಶ್ರೀನಿವಾಸ ಕರಿಯಣ್ಣ, ಕವಿತಾ, ಯಮುನ ರಂಗೇಗೌಡ, ದೇವೆಂದ್ರಪ್ಪ ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕರೆದೊಯ್ದಿದ್ದಾರೆ.