ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಸ್ಥಳ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಹಾಗೂ ಅರ್ಚಕರ ನಡುವೆ ಜಗಳ ಹಿನ್ನಲೆ, ದೇವಾಲಯದ ಆಭರಣಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.
ಕಳೆದ ಕೆಲವು ದಿನಗಳಿಂದ ದೇವಾಲಯದ ಧರ್ಮದರ್ಶಿ ಹಾಗೂ ಅರ್ಚಕರ ನಡುವೆ ಜಗಳ ನಡೆಯುತ್ತಿದ್ದ ಹಿನ್ನಲೆ ಜಿಲ್ಲಾಡಳಿತ ಮೇಲ್ವಿಚಾರಣ ಸಮಿತಿ ಹಾಗೂ ಸಲಹ ಸಮಿತಿ ರಚನೆ ಮಾಡಿತ್ತು. ಅಲ್ಲದೆ ಓರ್ವ ಅಧಿಕಾರಿಯನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ಇದರಿಂದ ಸಾಗರದ ಉಪ ವಿಭಾಗಾಧಿಕಾರಿ ನಾಗರಾಜ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಚಿನ್ನ ಹಾಗೂ ಬೆಳ್ಳಿಯ ಆಭರಣ ಪರಿಶೀಲಿಸಿದ್ದಾರೆ.
ಅಕ್ಕ ಸಾಲಿಗರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ದೇವಾಲಯದಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ತೂಕ ಹಾಕಿಸಿ ಲೆಕ್ಕ ಪಡೆದುಕೊಂಡರು. ಈ ವೇಳೆ 5 ಕೆ.ಜಿ ಚಿನ್ನ ಹಾಗೂ 30 ಕೆ.ಜಿ ಬೆಳ್ಳಿ ಆಭರಣಗಳು ಇದ್ದದ್ದು ಕಂಡು ಬಂದಿದೆ. ಬಳಿಕ ಆಭರಣಗಳನ್ನು ದೇವಸ್ಥಾನದ ಸುಪರ್ದಿನಲ್ಲಿಯೇ ಇಟ್ಟಿದ್ದಾರೆ. ಹುಂಡಿ ಹಣ ಎಣಿಕೆಗೂ ಸಹ ಮುಂದಾಗಿದ್ದರು. ಆದರೆ ಹುಂಡಿಯ ಕೀ ಟ್ರಸ್ಟಿ ರಾಮಪ್ಪನವರ ಬಳಿ ಇದ್ದು, ಈ ವೇಳೆ ಟ್ರಸ್ಟಿ ಸ್ಥಳದಲ್ಲಿ ಇಲ್ಲದಿದ್ದರಿಂದ ಹುಂಡಿ ಹಣ ಎಣಿಕೆ ಮಾಡಲು ಸಾಧ್ಯವಾಗದ ಕಾರಣ ವಾಪಸ್ ತೆರಳಿದ್ದಾರೆ.
ಉಪ ವಿಭಾಗಾಧಿಕಾರಿ ನಾಗರಾಜ್ ಅವರು ಯಾವುದೇ ನೊಟೀಸ್ ನೀಡದೇ ಚಿನ್ನ ಹಾಗೂ ಬೆಳ್ಳಿ ಆಭರಣ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪರಿಶೀಲನೆ ನಡೆಸಿದ್ದಕ್ಕೆ ಟ್ರಸ್ಟಿನವರ ಬಳಿ ಯಾವುದೇ ಸಹಿಯನ್ನು ಪಡೆಯದೇ ತೆರಳಿದ್ದಾರೆ ಎಂದು ಟ್ರಸ್ಟ್ನ ಸದಸ್ಯರು ಆರೋಪಿಸಿದ್ದಾರೆ.