ಶಿವಮೊಗ್ಗ: ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಅಶೋಕ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬೆಳ್ಳಂಬೆಳಗ್ಗೆ ಕಾವೇರಿ ಹೋರಾಟ ನಡೆಸಿದ ಕನ್ನಡ ಪರ ಸಂಘಟನೆಗಳು, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜೊತೆಗೆ ಕರವೇ ಹಾಗೂ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಾವೇರಿ ನಮ್ಮದು, ಕಾವೇರಿ ನಮ್ಮದು ಎಂದು ಘೋಷಣೆ ಕೂಗಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ವೇದಿಕೆ ಕಾರ್ಯಕರ್ತರನ್ನು ಬಂಧಿಸಿ ಕರೆದುಕೊಂಡು ಹೋದರು.
ಎಂದಿನಂತೆ ವಾಹನ ಸಂಚಾರ: ಕರ್ನಾಟಕ ಬಂದ್‌ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಂತಹ ಪ್ರತಿಕ್ರಿಯೆ ವ್ಯಕ್ತವಾದಂತೆ ಕಂಡುಬಂದಿಲ್ಲ. ಕೆ.ಎಸ್.ಆರ್.ಟಿ.ಸಿ. ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇದೆ. ಜಿಲ್ಲೆಯಲ್ಲಿ ಬಂದ್‌ಗೆ ಇದುವರೆಗೂ ಯಾವುದೇ ಸಂಘಟನೆ ಕರೆ ನೀಡಿಲ್ಲ. ಉಳಿದಂತೆ 11 ಗಂಟೆಯ ನಂತರ ಕರವೇ ಹಾಗೂ ರೈತ ಸಂಘ ಪ್ರತ್ಯೇಕ ಪ್ರತಿಭಟನೆ ನಡೆಸಲಿವೆ.
ರಾಯಚೂರಿಗಿಲ್ಲ ಬಂದ್ ಬಿಸಿ: ಕಾವೇರಿ ನದಿ ನೀರು ವಿಚಾರವಾಗಿ ಇಂದು ಕರೆ ನೀಡಿದ ಕರ್ನಾಟಕ ಬಂದ್ ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಎಂದಿನಂತೆ ಜನ ಜೀವನ ಸಾಗುತ್ತಿದೆ. ವ್ಯಾಪಾರ ವಹಿವಾಟು, ಸಾರಿಗೆ ಬಸ್, ಆಟೋ ಸಂಚಾರ, ವಾಹನಗಳ ಸಂಚಾರ ಹಾಗೂ ಶಾಲಾ-ಕಾಲೇಜು ಎಂದಿನಂತೆ ನಡೆಯುತ್ತಿದೆ.
ಇನ್ನು ಕರವೇ (ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ) ಕಾರ್ಯಕರ್ತರು ಗ್ರಾಮ ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ಖಾಲಿ ಬಿಂದಿಗೆಯನ್ನು ಪ್ರದರ್ಶನ ಮಾಡಿ, ನಗರದ ಮಹಾವೀರ ಸರ್ಕಲ್ ಹತ್ತಿರದ ಶ್ರೀಕಂದಗಡ್ಡೆ ಮಾರಮ್ಮಾ ದೇವಿಗೆ ದೇವಾಸ್ಥಾನಕ್ಕೆ ತೆರಳಿ, ಅಲ್ಲಿಯ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ತೀವ್ರವಾಗಿ ಬರ ಆವರಿಸಿದೆ. ಇದರಿಂದ ರಾಜ್ಯ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ರಾಜ್ಯಕ್ಕೆ ಕಾವೇರಿಯನ್ನು ನಿಲ್ಲಿಸಬೇಕು ಹಾಗೂ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿದ ಪ್ರಾಧಿಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ರದ್ದಾಗಲಿ ಎಂದು ಒತ್ತಾಯಿಸಿ, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಬಳ್ಳಾರಿಯಲ್ಲಿ ಬಂದ್‌ಗೆ ಸಿಗದ ಬೆಂಬಲ... ಅಂಗಡಿ ಮುಂಗಟ್ಟು ಓಪನ್, ಎಂದಿನಂತೆ ಬಸ್ ಆಟೋ ಸಂಚಾರ