ಶಿವಮೊಗ್ಗ: ಕೊರೊನಾ ಬೆನ್ನಲ್ಲೇ ಮಲೆನಾಡಿಗೆ ಮತ್ತೊಂದು ಮಹಾಮಾರಿ ರೋಗ ಕಾಲಿಟ್ಟಿದೆ. ಕೊರೊನಾ ಜನರನ್ನು ಬೆಂಬಿಡದೆ ಕಾಡುತ್ತಿದ್ದರೆ, ಲುಂಪಿ ಸ್ಕಿನ್ ಡಿಸೀಸ್ ಎಂಬ ಕಾಯಿಲೆ ಇಲ್ಲಿನ ಜಾನುವಾರುಗಳಿಗೆ ಮಾರಣಾಂತಿಕವಾಗಿ ಕಾಡುತ್ತಿದೆ.
ಮಲೆನಾಡಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಈ ರೋಗ ಕಾಣಿಸಿಕೊಂಡ ಹಸುಗಳನ್ನು ಪ್ರತ್ಯೇಕ ಐಸೋಲೇಷನ್ ಮಾಡದೇ ಇದ್ದಲ್ಲಿ ಇತರೆ ಹಸುಗಳಿಗೂ ಹರಡುತ್ತದೆ. ಜಾನುವಾರುಗಳ ಚರ್ಮಗಳ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಬಳಿಕ ಈ ಗಂಟುಗಳಿಂದ ರಕ್ತಸ್ರಾವವಾಗಲಾರಂಭಿಸುತ್ತದೆ. ಈ ವೇಳೆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಅಮಾಯಕ ಪ್ರಾಣಿಗಳು ಸಾವನ್ನಪ್ಪುವುದರಲ್ಲಿ ಅನುಮಾನವೇ ಇಲ್ಲ.
ಪಾಕ್ಸ್ ವಿರಿಡೆ ಎಂಬ ವೈರಸ್ನಿಂದ ಈ ಚರ್ಮಗಂಟು ರೋಗ( ಲುಂಪಿ ಸ್ಕಿನ್ ಡಿಸೀಸ್) ಹರಡುತ್ತಿದ್ದು, ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳ ಜಾನುವಾರುಗಳಲ್ಲಿ ಈ ರೋಗ ಪತ್ತೆಯಾಗಿದೆ. ಆಫ್ರಿಕ, ರಷ್ಯಾ, ಯುರೋಪ್ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಕಾಯಿಲೆ ಇದೀಗ ಮಲೆನಾಡಿಗೂ ಕಾಲಿಟ್ಟಿದೆ. ದೇಶದಲ್ಲಿ ಕೇರಳ ಹಾಗೂ ಒಡಿಸ್ಸಾ ಬಳಿಕ ಮಲೆನಾಡಿನ ಗ್ರಾಮಗಳಲ್ಲಿ ರೋಗ ಪತ್ತೆಯಾಗಿದೆ. ಜಾನುವಾರುಗಳ ನೇರ ಸಂಪರ್ಕ, ಮೇವು, ನೀರಿನಿಂದಲೂ ಖಾಯಿಲೆ ಹರಡುತ್ತಿರುವುದು ಗೋವುಗಳನ್ನು ಸಾಕುತ್ತಿರುವವರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ರೋಗಗ್ರಸ್ತ ಜಾನುವಾರುಗಳನ್ನು ಗುಂಪಿನಿಂದ ಪ್ರತ್ಯೇಕವಾಗಿರಸಲು ಪಶುಪಾಲನಾ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸಲಾರಂಭಿಸಿದೆ.
ಒಟ್ಟಾರೆ, ಮಲೆನಾಡಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಈ ಚರ್ಮಗಂಟು ರೋಗ ಕೊರೊನಾದ ರೀತಿಯಲ್ಲೇ ನೇರಸಂಪರ್ಕದಿಂದ ಹಬ್ಬುತ್ತಿದೆ. ಒಂದು ಜಾನುವಾರಿನಲ್ಲಿ ಈ ರೋಗ ಪತ್ತೆಯಾದರೆ ಅದೇ ಗುಂಪಿನ ಶೇಕಡಾ 20 ರಷ್ಟು ಜಾನುವಾರುಗಳಿಗೆ ಹಬ್ಬುತ್ತದೆ. ರೋಗ ಪೀಡಿತ ಜಾನುವಾರುಗಳ ಮರಣ ಪ್ರಮಾಣ ಗರಿಷ್ಟ ಶೇಕಡಾ 5ರಷ್ಟಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.