ಶಿವಮೊಗ್ಗ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಇಂದು ನಗರದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಅಧಿಕಾರಿ ಹಾಗು ಸಿಬ್ಬಂದಿ ವರ್ಗಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಇಂದು ಮತ್ತು ನಾಳೆ ಉಪ ಲೋಕಾಯುಕ್ತರು ಜಿಲ್ಲಾ ಪ್ರವಾಸದಲ್ಲಿದ್ದಾರೆ. ಇಂದು ನಗರದ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡುವ ವಿಚಾರವನ್ನು ಗೌಪ್ಯವಾಗಿಟ್ಟಿದ್ದು, ದಿಢೀರ್ ಅಂತ ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲಿಸಿದರು.
ಸರ್ಕಾರಿ ಶಾಲೆ, ಹಾಸ್ಟೆಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ:
ಉಪ ಲೋಕಾಯುಕ್ತರು ಮೊದಲು ಗಾಡಿಕೊಪ್ಪದ ಸರ್ಕಾರಿ ಫ್ರೌಢಶಾಲೆಗೆ ಭೇಟಿ ನೀಡಿ ಕೊಠಡಿ ಸೇರಿದಂತೆ ಅಡುಗೆ ಕೋಣೆ, ದಿನಸಿ ದಾಸ್ತಾನು ಕೊಠಡಿ ಹಾಗೂ ಉಗ್ರಾಣ ಪರಿಶೀಲಿಸಿದರು. ಈ ವೇಳೆ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರು ಶಿಕ್ಷಕರು ಹಾಜರಿ ಹಾಕಿ ಶಾಲೆಯಿಂದ ಹೊರ ಹೋಗಿದ್ದರು. ಈ ಬೇಜವಾಬ್ದಾರಿಯನ್ನು ಕಂಡ ಉಪ ಲೋಕಾಯುಕ್ತರು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಮೊಹಲ್ಲಾದ ಸರ್ಕಾರಿ ಬಾಲಕಿಯರ ಹಾಸ್ಟೆಲ್ಗೆ ಭೇಟಿ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ, ಪರಿಶೀಲನೆ:
ಬಾಪೂಜಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು ಇಲ್ಲಿನ ವೈದ್ಯರು, ನರ್ಸ್ ಸೇರಿದಂತೆ ರೋಗಿಗಳ ಬಳಿ ಇರುವ ಕುಂದು ಕೊರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಔಷಧ ದಾಸ್ತಾನು ಎಷ್ಟಿದೆ ಎಂಬುದರ ಬಗ್ಗೆ ಪ್ರಶ್ನಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ. ಜಿ.ಎಸ್.ಪಾಟೀಲ್, ಇದು ವರ್ಷದ ಮೊದಲ ಅನಿರೀಕ್ಷಿತ ಭೇಟಿಯಾಗಿದೆ. ಇನ್ನೂ ಮುಂದೆ ಇದೇ ರೀತಿ ಪ್ರತಿ ಜಿಲ್ಲೆಗೂ ಭೇಟಿ ನೀಡಲಾಗುವುದು. ಆಡಳಿತವನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರುತ್ತದೆ. ನಮ್ಮ ಉದ್ದೇಶ ಸರ್ಕಾರಿ ಯೋಜನೆ ಜನಸಾಮಾನ್ಯರಿಗೆ ತಲುಪುತ್ತಿದೆಯೇ ಎಂಬುದನ್ನು ಗಮನಿಸುವುದಾಗಿದೆ ಎಂದರು.