ಶಿವಮೊಗ್ಗ: ಶಂಕಿತ ಮಂಗನ ಕಾಯಿಲೆಗೆ ವ್ಯಕ್ತಿವೊರ್ವ ಬಲಿಯಾಗಿರುವ ಘಟನೆ ಸಾಗರದ ಮಂಡವಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಡವಳ್ಳಿ ಗ್ರಾಮದ ಚೌಡಪ್ಪ(40) ಶಂಕಿತ ಮಂಗನ ಕಾಯಿಲೆಗೆ ಮೃತ ಪಟ್ಟಿದ್ದಾರೆ. ಚೌಡಪ್ಪ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ನಿನ್ನೆ ಬೆಳಗ್ಗೆ ಕಾರ್ಗಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮೃತ ಚೌಡಪ್ಪನಿಗೆ ವೃದ್ದೆ ತಾಯಿ, ಅನಾರೋಗ್ಯ ಪೀಡಿತ ಪತ್ನಿ , ಮೂರು ವರ್ಷ ಹೆಣ್ಣು ಮಗು ಹಾಗೂ ಆರು ತಿಂಗಳ ಗಂಡು ಮಗು ಇದೆ. ಕುಟುಂಬಕ್ಕೆ ಚೌಡಪ್ಪನೇ ಆಧಾರ ಸ್ಥಂಬವಾಗಿದ್ದರು. ಚೌಡಪ್ಪ ಸಾವಿನಿಂದ ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಭಯದ ವಾತಾವರಣ ಉಂಟಾಗಿದೆ. ಕಳೆದ ವರ್ಷ ಅರಳಗೋಡು ಗ್ರಾಮ ಪಂಚಾಯತ್ನಲ್ಲಿ 20 ಕ್ಕೂ ಹೆಚ್ಚು ಜನ ಕೆಎಫ್ಡಿಗೆ ಬಲಿಯಾಗಿದ್ದರು.
ಮಂಗನ ಸಾವು ತಂದ ಭಯ:
ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 6 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ 17 ಮಂಗಗಳು ಸಾವನ್ನಪ್ಪಿವೆ. ಇದು ಗ್ರಾಮಸ್ಥರಲ್ಲಿ ಆಂತಕ ಸೃಷ್ಟಿ ಮಾಡಿದೆ ಎನ್ನುತ್ತಾರೆ ಗ್ರಾಮ ಪಂಚಾಯತ್ ಸದಸ್ಯರಾದ ರಾಜು.
ಕೆಎಫ್‌ಡಿ ಸಾವಿನ ಬಗ್ಗೆ ಅಲ್ಲಗಳೆದ ಆರೋಗ್ಯ ಇಲಾಖೆ:
ಗ್ರಾಮಸ್ಥರು ಮಂಗನ ಕಾಯಿಲೆಯ ಬಗ್ಗೆ ಆಂತಕ ವ್ಯಕ್ತಪಡಿಸಿದರೆ, ಆರೋಗ್ಯ ಇಲಾಖೆಯು ಸಾವಿನ ಬಗ್ಗೆ ಅಲ್ಲಗಳೆದಿದೆ. ಚೌಡಪ್ಪನವರು ಬಹಳ ಹಿಂದಿನಿಂದಲೂ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚೌಡಪ್ಪ ಕೆಎಫ್ಡಿಗೆ ಬಲಿಯಾಗಿಲ್ಲ ಎನ್ನುತ್ತಾರೆ ಸಾಗರ ತಾಲೂಕು ಆರೋಗ್ಯಾಧಿಕಾರಿ ಮೋಹನ್.