ಶಿವಮೊಗ್ಗ: "ಕೊಟ್ಟ ಮಾತನ್ನು ಉಳಿಸಿಕೊಂಡು, ಐದು ಗ್ಯಾರಂಟಿಗಳನ್ನು ಜನರಿಗೆ ಸಮರ್ಪಿಸಿ ಈ ಬಸವಣ್ಣ, ಕುವೆಂಪು ಅವರ ನಾಡಿನಲ್ಲಿ ನುಡಿದಂತೆ ನಡೆದಿದ್ದೇವೆ, ಇದು ನನ್ನ ಭಾಗ್ಯ" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಶಿವಮೊಗ್ಗದಲ್ಲಿ ಯುವನಿಧಿ ಗ್ಯಾರಂಟಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಮ್ಮ ಗ್ಯಾರಂಟಿ ಯೋಜನೆ ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಯೋಜನೆ. ಈ ಗ್ಯಾರಂಟಿಯನ್ನು ನಿಮ್ಮ ಜೇಬಿಗೆ ಹಣ ತುಂಬಲು ನೀಡುತ್ತಿಲ್ಲ, ಆರ್ಥಿಕ, ಸಾಮಾಜಿಕ ಶಕ್ತಿ ನೀಡಲು ಮತ್ತು ನಿಮ್ಮ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲು ಹಾಗೂ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ, ಯುವಕರು ನಿರುದ್ಯೋಗಿಗಳಾಗಿರುವ ಸಂದರ್ಭದಲ್ಲಿ ನಿಮಗೆ ಮಾನಸಿಕವಾಗಿ ಕಾಂಗ್ರೆಸ್ ಸರ್ಕಾರ ಇದೆ ಎಂದು ಶಕ್ತಿ ತುಂಬಲು ಈ ಕಾರ್ಯಕ್ರಮಗಳನ್ನು ನಿಮಗೆ ಕೊಟ್ಟಿದ್ದೇವೆ" ಎಂದರು.
"ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ದೇವರು ನಮಗೆ ಕೊಟ್ಟ ಎರಡು ಆಯ್ಕೆ ಒಂದು ಕೊಟ್ಟು ಹೋಗಬೇಕು, ಮತ್ತೊಂದು ಬಿಟ್ಟು ಹೋಗಬೇಕು. ಅದರಂತೆ ನಮ್ಮ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿ ನುಡಿದಂತೆ ನಡೆದುಕೊಂಡು ಈ ಕೆಲಸ ಮಾಡಿಕೊಂಡು ಬಂದಿದ್ದೇವೆ. ಉದ್ಯೋಗ ಪಡೆಯಲು ಚಿಂತನೆ ಮಾಡಬೇಡಿ, ಹತ್ತಾರು ಜನರಿಗೆ ನೀವು ಉದ್ಯೋಗ ಕೊಡಲು ಆಲೋಚನೆಯನ್ನು ಮಾಡಬೇಕು" ಎಂದು ಯುವಜನರಿಗೆ ಕರೆ ನೀಡಿದರು.
‘ಬಲೆ ನೀಡುವ ಜತೆಗೆ ಮೀನು ಹಿಡಿಯುವುದನ್ನು ಕಲಿಸಿಕೊಡಬೇಕು‘: ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, "ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಆರ್ಥಿಕ ಚೈತನ್ಯವನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರ. ಯುವಕರ ಕೈಗೆ ಮೀನಿನ ಬಲೆ ನೀಡುವುದರ ಜೊತೆಗೆ ಮೀನು ಹೇಗೆ ಹಿಡಿಯಬೇಕು ಎಂದು ಹೇಳಿಕೊಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಯುವಜನರಿಗೆ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಮುಟ್ಟಿಸುವ ಕೆಲಸವನ್ನು ಮಾಡುತ್ತಿವೆ. ಹಾಗಾಗಿ ಯುವಜನರು ಅವುಗಳನ್ನು ತಿಳಿದುಕೊಂಡು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಯೋಜನೆಗಳನ್ನು ಜಾರಿಗೆ ತಂದಿದಕ್ಕೆ ಸಾರ್ಥಕವಾಗುತ್ತದೆ" ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಮಾತನಾಡಿ, "ಯುವಜನರಿಗೆ ಮಹಾನ್ ಕೊಡುಗೆಯನ್ನು ನೀಡಲು ನಮ್ಮ ಸರ್ಕಾರ ಮುಂದಾಗಿದೆ. ಯುವನಿಧಿಗೆ ಗ್ಯಾರಂಟಿ ಯೋಜನೆಗೆ ರಾಜ್ಯದ 70 ಸಾವಿರ ಯುವಜನರು ನೋಂದಾಯಿಸಿಕೊಂಡಿದ್ದಾರೆ. ಈಗ ಪದವಿ ಮತ್ತು ಡಿಪ್ಲೋಮ ಪೂರೈಸಿರುವ 5 ಲಕ್ಷಕ್ಕೂ ಹೆಚ್ಚು ಯುವಜನರು ಯೋಜನೆಗೆ ನೋಂದಣಿಯಾಗಲು ಅವಕಾಶ ಇದೆ. ಯುವನಿಧಿ ಲಾಭವನ್ನು ಯುವಜನರು ಪಡೆದುಕೊಳ್ಳಬೇಕು. ನಮ್ಮ ಸರ್ಕಾರ ಗುರಿ ನಿರುದ್ಯೋಗಿಗಳಿಗೆ ಕೇವಲ ಹಣ ಕೊಡುವುದಲ್ಲ. ಯುವಜನರಿಗೆ ಯುವನಿಧಿಯ ಜೊತೆಗೆ ಕೌಶಲ್ಯವನ್ನು ಕೊಡುವ ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಯುವನಿಧಿ ಯೋಜನೆಗೆ ಅದ್ಧೂರಿ ಚಾಲನೆ: ಫಲಾನುಭವಿಗಳ ಖಾತೆಗೆ ಹಣ ಜಮೆ