ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅರ್ಭಟ ಹೆಚ್ಚಾಗಿದ್ದು, ಸಂಭವನೀಯ ಪ್ರವಾಹದ ಕುರಿತು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಕಂದಾಯ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದರು.
ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ತುಂಗಾ ನದಿ ದಂಡೆ ಶಿವಮೊಗ್ಗದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹ ಸೃಷ್ಟಿಸಿತ್ತು. ಈ ಹಿನ್ನಲೆಯಲ್ಲಿ ನಗರದ ಕೊರ್ಪಲಯ್ಯನ ಛತ್ರ, ಸೀಗೆಹಟ್ಟಿ, ಭೀಮನಮಡು ಸೇರಿದಂತೆ ಹಲವು ಕಡೆ ಪರಿಶೀಲನೆ ನಡೆಸಿದರು.
ನಗರದಲ್ಲಿ ಪ್ರವಾಹ ಬರಲು ಕಾರಣವಾದ ತುಂಗಾ ಅಣೆಕಟ್ಟೆಗೆ ಜಿಲ್ಲಾಧಿಕಾರಿಗಳು ಎಸ್ಪಿ ಶಾಂತರಾಜು ಅವರ ಜೊತೆ ಭೇಟಿ ನೀಡಿ ಪರಿಶೀಲಿಸಿದರು. ಜಲಾಶಯದ ಇಂಜಿನಿಯರ್ಗಳ ಜೊತೆ ಸಮಲೋಚನೆ ನಡೆಸಿದರು. ಯಾವುದೇ ಅಪಾಯ ಆಗದಂತೆ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ತಹಶೀಲ್ದಾರ್ ನಾಗರಾಜ್, ತುಂಗಾ ಜಲಾಶಯದ ಸತೀಶ್ ಸೇರಿದಂತೆ ಇತರರು ಹಾಜರಿದ್ದರು.