ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ತಿದ್ದುಪಡಿ ನೀತಿಗಳನ್ನು ಖಂಡಿಸಿ ಸ್ವಾತಂತ್ರ್ಯ ದಿನಾಚರಣೆ ಬದಲಿಗೆ ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆಯನ್ನು ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ವತಿಯಿಂದ ಆಚರಿಸಲಾಯಿತು.
ನಗರದ ಶಿವಪ್ಪನಾಯಕ ಪ್ರತಿಮೆ ಎದುರು ನೂರಾರು ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರ ಭೂಮಿ ಹಕ್ಕನ್ನು ಹರಣ ಮಾಡಲು ಸರ್ಕಾರಗಳು ಹೊರಟಿವೆ. ರೈತನ ಉತ್ಪಾದನಾ ಭೂಮಿಯನ್ನು ಖಾಸಗಿ, ಬಂಡವಾಳಶಾಹಿಗಳಿಗೆ ವರ್ಗಾಯಿಸುತ್ತಿದೆ. ಉತ್ಪಾದನಾ ಹಕ್ಕನ್ನು ರೈತರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಆರೋಪಿಸಿದರು.
ಶಿವಪ್ಪನಾಯಕ ಪ್ರತಿಮೆಯಿಂದ ಗಾಂಧಿ ಪ್ರತಿಮೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು.