ಶಿವಮೊಗ್ಗ: ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಕುರುಬರ ಪಾಳ್ಯದ ಬಳಿ ಮೀನು ಹಿಡಿಯಲು ಹೋಗಿದ್ದ ಮೊಹಿನ್ ಖಾನ್(18) ಹಾಗೂ ಅಂಜುಂ ಖಾನ್(18) ನೀರುಪಾಲಾದ ಯುವಕರು. ಇಬ್ಬರು ಯುವಕರು ಸೋಮವಾರ ಮಧ್ಯಾಹ್ನ ಕುರುಬರ ಪಾಳ್ಯದ ಬಳಿ ಮೀನು ಹಿಡಿಯಲು ನದಿಗೆ ಹೋಗಿದ್ದಾರೆ. ಮೊಯಿನ್ ಖಾನ್ ಸವಾಯಿ ಪಾಳ್ಯದ ನಿವಾಸಿಯಾಗಿದ್ದು, ಅಂಜುಂ ಖಾನ್ ಇಲಿಯಾಸ್ ನಗರದ ನಿವಾಸಿ. ಮೊಯಿನ್ ಖಾನ್ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿಸಿಎ ಓದುತ್ತಿದ್ದ. ಅಂಜುಂ ಖಾನ್ ಪ್ರಥಮ ವರ್ಷದ ಬಿಎ ಓದುತ್ತಿದ್ದ.
ಇಬ್ಬರು ನದಿಗೆ ಹೇಗೆ ಇಳಿದರು ಅಂತ ಯಾರಿಗೂ ಗೂತ್ತಾಗಿಲ್ಲ. ದಂಡೆಯ ಮೇಲೆ ಇರುವ ಬಟ್ಟೆಯನ್ನು ಗಮನಿಸಿ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳಿಗೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೊಯಿನ್ ಖಾನ್ ಮೃತದೇಹ ಪತ್ತೆಯಾಗಿದೆ. ಇನ್ನೋರ್ವನ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜಲಪಾತದ ನೀರಿನ ರಭಸಕ್ಕೆ ಕೊಚ್ಚಿ ಹೋದ ಯುವಕ ಸಾವು
ಈ ಹಿಂದಿನ ಘಟನೆ: ಕೆಲವು ತಿಂಗಳ ಹಿಂದೆ, ಬಂಡೆಯ ಮೇಲೆ ನಿಂತು ಜಲಪಾತ ವೀಕ್ಷಿಸುತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರುಪಾಲಾಗಿದ್ದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ನಡೆದಿತ್ತು. ಭದ್ರಾವತಿ ಮೂಲದ ಶರತ್ ಕುಮಾರ್ (23) ಕೊಚ್ಚಿಹೋಗಿರುವ ಯುವಕ. ಈ ಯುವಕ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿತ್ತು. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.
ಯುವಕ ಶರತ್ ಕುಮಾರ್ ಬಂಡೆಯ ಮೇಲೆ ನಿಂತು ಧುಮ್ಮಿಕ್ಕುವ ಜಲಪಾತವನ್ನು ವೀಕ್ಷಿಸುತ್ತಿದ್ದ. ಇದನ್ನು ಆತನ ಸ್ನೇಹಿತ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ. ಆದರೆ, ಯುವಕ ಶರತ್ ಕುಮಾರ್ ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಕೊಲ್ಲೂರು ಪಿಎಸ್ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಯುವಕನಿನಾಗಿ ಸುಮಾರು 6 ಗಂಟೆಗಳ ಕಾಲ ಸ್ಥಳೀಯರು, ಆಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಮತ್ತು ಮುಳುಗು ತಜ್ಞರ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಒಂದು ವಾರದ ಬಳಿಕ ಯುವಕನ ಮೃತದೇಹ ಪತ್ತೆಯಾಗಿತ್ತು.