ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ನಡೆಯಬೇಕಿದ್ದ ಬಿಜೆಪಿ ಕಾರ್ಯಕಾರಿಣಿ ಹಾಗೂ ಪದಾಧಿಕಾರಿಗಳ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸುವ ತೀರ್ಮಾನವನ್ನು ಇಂದಿನ ವಿಶೇಷ ಸಭೆಯಲ್ಲಿ ತೆಗದುಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮುಕ್ತಾಯವಾದ ರಾಜ್ಯ ಬಿಜೆಪಿಯ ವಿಶೇಷ ಸಭೆಯ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಶಿವಮೊಗ್ಗದ ವಿಶೇಷ ಸಭೆ ರಾಜ್ಯಕ್ಕೆ ಒಂದು ಹೊಸ ಸಂದೇಶ ನೀಡಿದೆ. ರಾಜ್ಯದ ರಾಜಕಾರಣದಲ್ಲಿ ಶಿವಮೊಗ್ಗದ ಕೊಡುಗೆ ವಿಶಿಷ್ಟವಾಗಿದೆ. ಕಾರ್ಯಕಾರಿಣಿ ಇಡೀ ನಾಡಿಗೆ ಹೊಸ ಸಂದೇಶ ನೀಡಿದೆ ಎಂದರು.
ಓದಿ: ಮಾಸ್ಕ್-ಪಿಪಿಇ ಕಿಟ್‌ಗಳ ದೀರ್ಘಕಾಲದ ಬಳಕೆಯ ಅಡ್ಡ ಪರಿಣಾಮವೇನು? ತಜ್ಞರು ಏನಂತಾರೆ..
ಕೇಂದ್ರ ಸರ್ಕಾರ, ರೈತರು ಯಾರ ಕಪಿಮುಷ್ಠಿಯಲ್ಲಿ ಒದ್ದಾಡುತ್ತಿದ್ದರೋ ಅವರಿಂದ ವಿಮುಕ್ತಿಗೊಳಿಸುವ ಕೆಲಸ ಮಾಡಲು ಪ್ರಾರಂಭಿಸಿದೆ. ಯಡಿಯೂರಪ್ಪ ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದು, ಉಳಿದ ಅವಧಿಗೂ ಉತ್ತಮ ಕಾರ್ಯ ಮಾಡಲಿದೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ಅರುಣ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಜನವರಿ 11, 12 ಮತ್ತು 13 ರಂದು ರಾಜ್ಯದಲ್ಲಿ 5 ತಂಡಗಳಲ್ಲಿ ಗ್ರಾಮ ಸೇವಕ್ ಸಮಾವೇಶ ನಡೆಸಲಾಗುವುದು. ನಳಿನ್ ಕುಮಾರ್ ಕಟೀಲ್ ಅವರ ತಂಡ ಜನವರಿ 11 ರಂದು ಮೈಸೂರಿನಲ್ಲಿ ಜನಸೇವಕ್ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಎಂದರು.