ಶಿವಮೊಗ್ಗ: ಜಿಲ್ಲೆಯಲ್ಲಿ ದೆಹಲಿಯ ಆಗ್ರಾದಲ್ಲಿ ತಯಾರಾಗುವ ಪೇಟಾ ಸಿಹಿ ತಯಾರು ಮಾಡುವ ಉದ್ಯಮ ಆರಂಭಿಸಲಾಗಿದೆ. ಲಾಕ್‌ಡೌನ್ ನಿಂದ ಬೆಳೆ ಬೆಳೆದ ರೈತರು ಮಾರುಕಟ್ಟೆ ಸಿಗದೇ ತರಕಾರಿ, ಹಣ್ಣುಗಳನ್ನು ಮಣ್ಣು ಪಾಲು ಮಾಡುತ್ತಿದ್ದರು. ಈ ವೇಳೆ, ಬೆಳೆಯನ್ನ ಸ್ಥಳೀಯವಾಗಿ ಬಳಸಿಕೊಂಡು ಉದ್ಯಮ ಮಾಡಬೇಕು ಎಂಬ ಸರ್ಕಾರದ ಆಶಯಕ್ಕೆ ತಕ್ಕಂತೆ ತೀರ್ಥಹಳ್ಳಿಯಲ್ಲಿ ಆರಗ ಪೇಟಾ ತಯಾರು ಮಾಡಲಾಗುತ್ತಿದೆ.
ಬೂದಗುಂಬಳಕಾಯಿ ಯಿಂದ ತಯಾರಾಗುವ ಪೇಟಾ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ಸುತ್ತ ಮುತ್ತ ಬೆಳೆಯುವ ಬೂದ ಗುಂಬಳಕಾಯಿ ರಾಜಧಾನಿ ದೆಹಲಿಯಲ್ಲಿ ತುಂಬಾ ಫೇಮಸ್. ಕಾರಣ ಇಲ್ಲಿನ ಬೂದಗುಂಬಳದಿಂದ ಆಗ್ರಾದ ಹೆಸರಿನಲ್ಲಿ ಪೇಟಾ ತಯಾರು ಮಾಡಲಾಗುತ್ತದೆ.
ಇದರಿಂದ ಪ್ರತಿ ವರ್ಷ ದೆಹಲಿಗೆ ಲಕ್ಷಾಂತರ ಟನ್ ಬೂದಗುಂಬಳಕಾಯಿ ರಫ್ತಾಗುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದ ಬೂದಗುಂಬಳ ದೆಹಲಿಗೆ ಕಳುಹಿಸಲಾಗದೇ ಮಣ್ಣಿನಲ್ಲಿ ಕೊಳೆಯುವಂತಾಗಿತ್ತು.
ಈ ಬಗ್ಗೆ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ತಹಶೀಲ್ದಾರ್ ಶ್ರೀಪಾದ್ ಹಾಗೂ ತೋಟಗಾರಿಕಾ ಇಲಾಖೆಯವರೊಂದಿಗೆ ಮಾತನಾಡಿ ಸ್ಥಳೀಯವಾಗಿ ಬೂದಗುಂಬಳಕ್ಕೆ ಮಾರುಕಟ್ಟೆ ಸಿಗಲು ಯತ್ನಿಸಿದ್ದಾರೆ. ಇವರ ಯತ್ನಕ್ಕೆ ತೀರ್ಥಹಳ್ಳಿ ತಾಲೂಕಿನ ಕುಂಟುವಳ್ಳಿಯ ಉದ್ಯಮಿ ವಿಶ್ವನಾಥ್ ಸ್ಪಂದಿಸಿದ್ದಾರೆ. ಆಗ್ರಾದ ಪೇಟಾವನ್ನು ಇಲ್ಲೆ ತಯಾರು ಮಾಡುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ವಿಶ್ವನಾಥ್ ಸಹ ಒಂದು ಪ್ರಯತ್ನ ಮಾಡೋಣ ಅಂತ ಮುಂದಾಗಿದ್ದಾರೆ. ಇದೀಗ ಆಗ್ರಾದ ಪೇಟಾ ತೀರ್ಥಹಳ್ಳಿಯಲ್ಲಿಯೇ ತಯಾರು ಮಾಡುತ್ತಿದ್ದಾರೆ. ಇದಕ್ಕೆ ಆರಗ ಪೇಟಾ ಎಂದು ಹೆಸರಿಡಲಾಗಿದೆ.
ಪೇಟಾ ತಯಾರಿಕೆ ವಿಧಾನ
ಬೂದಕುಂಬಳವನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಅದನ್ನು ಸಕ್ಕರೆ ಪಾಕದಲ್ಲಿ ಹಾಕಿ ನಂತರ ಎಣ್ಣೆಯಲ್ಲಿ ಕರಿದಾಗ ಪೇಟಾ ತಯಾರಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇದಕ್ಕೆ ಯಾವುದೇ ರಾಸಾಯನಿಕ ಮಿಶ್ರಣ ಮಾಡದೇ ಇರುವುದರಿಂದ ಸಾಕಷ್ಟು ಬೇಡಿಕೆ ಇದೆ. ವಿಶ್ವನಾಥ್ ಅವರು ತಮ್ಮ ವಿ-ಟೆಕ್ ಇಂಡಸ್ಟ್ರೀಸ್ ನಡೆಸುತ್ತಿದ್ದು, ಜೊತೆಗೆ ಇಬ್ಬನಿ ಪುಡ್ ಇಂಡಸ್ಟ್ರೀಸ್ ಸಹ ನಡೆಸುತ್ತಿದ್ದಾರೆ. ಸದ್ಯ ಇವರು ವಿವಿಧ ಮಸಾಲಪುಡಿಗಳನ್ನು ಹಾಗೂ ಮಿನರಲ್ ನೀರಿನ ಘಟಕವನ್ನು ಹೊಂದಿದ್ದಾರೆ. ಇದರಲ್ಲಿ ಈಗ ಪೇಟಾ ತಯಾರಿಸುತ್ತಿದ್ದಾರೆ.
ಬೇಡಿಕೆ ಹೆಚ್ಚಿಸಿ ಕೊಂಡಿರುವ ಆರಗ ಪೇಟಾ
ಆರಗ ಪೇಟಾ ಈಗ ತೀರ್ಥಹಳ್ಳಿಯಲ್ಲಿ ನಿತ್ಯ 10 ರಿಂದ 15 ಕೆ.ಜಿ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಉತ್ತರ ಭಾರತೀಯರು ಹೆಚ್ಚಾಗಿ ಇರುವುದರಿಂದ ಇಲ್ಲೂ ಸಹ ಬೇಡಿಕೆ ಇದೆ. ಉದ್ಯಮಿ ವಿಶ್ವನಾಥ್ ರವರು ಬೆಂಗಳೂರಿನ ಒನ್ ಇಂಡಿಯಾ ಎಂಬ ಎನ್‌ಜಿಒ ಜೊತೆ ಸೇರಿ ಪೇಟಾಗೆ ಮಾರುಕಟ್ಟೆ ಹುಡುಕುತ್ತಿದ್ದಾರೆ. ಸದ್ಯ ನಿತ್ಯ 10 ಟನ್ ಪೇಟಾ ತಯಾರು ಮಾಡಲಾಗುತ್ತಿದೆ. ಮಾಡಿದ ಪೇಟಾಕ್ಕೆ ಸರಿಯಾಗಿ ಆರ್ಡರ್ ಸಹ ಬರುತ್ತಿದೆ ಎನ್ನುತ್ತಾರೆ ವಿಶ್ವನಾಥ್ ಕುಂಟುವಳ್ಳಿ. ಇವರು ಬೂದಕುಂಬಳ ಪ್ರತಿ ಕೆ.ಜಿಗೆ 4 ರೂ ತನಕ ನೀಡುತ್ತಿದ್ದಾರೆ. ಅದೇ ಆಗ್ರಾದವರು ಕೆಜಿಗೆ ಕೇವಲ 70 ಪೈಸೆ ನೀಡುತ್ತಿದ್ದರು. ವಿಶ್ವನಾಥ್ ರವರು ನಮ್ಮ ಬೇಡಿಕೆಗೆ ಮಣಿದು ಪೇಟಾ ತಯಾರು ಮುಂದಾಗಿ ಬೂದುಕುಂಬಳವನ್ನು ಖರೀದಿ ಮಾಡಿ ಸ್ಥಳೀಯ ರೈತರಿಗೆ ಮಾರುಕಟ್ಟೆ ಒದಗಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಜಿಲ್ಲಾ ತೋಟಗಾರಿಕೆಯ ಸಹಾಯಕ ನಿರ್ದೇಶಕ ಯೋಗೀಶ್ ಅವರು, ಅಂದಹಾಗೆ ನೀವು ಒಮ್ಮೆ ಆರಗ ಪೇಟಾ ಸವಿಯುವುದನ್ನು ಮರೆಯಬೇಡಿ.