ಶಿವಮೊಗ್ಗ: ನಗರದ ಇಎಸ್ಐ ವೈದ್ಯಾಧಿಕಾರಿ ಡಾ.ಎಸ್.ರಾಜು 2015 ರಿಂದ 2018 ರ ತನಕ ಸುಮಾರು 2.89 ಕೋಟಿ ರೂ.ಗಳಷ್ಟು ಹಣ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿ.ಹೆಚ್.ರಸ್ತೆಯ ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯದಲ್ಲಿ ಐದಾರು ವರ್ಷಗಳಿಂದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಎಸ್.ರಾಜು ಕಾರ್ಮಿಕರಿಗೆ ಮರು ಪಾವತಿಯಾಗುವ ಹಣವನ್ನು ಕಾರ್ಮಿಕರಿಗೆ ನೀಡದೆ ತನ್ನ ಕಚೇರಿಯ ಸಿಬ್ಬಂದಿ ಜೊತೆ ಸೇರಿ ಸತತ ನಾಲ್ಕು ವರ್ಷ ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಎಸ್ಐ ಸೌಲಭ್ಯ ಇರುವ ಕಾರ್ಮಿಕರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಿಲ್ ಅನ್ನು ವಿಮಾ ಚಿಕಿತ್ಸಾಲಯದ ಮೂಲಕ ಇಎಸ್ಐ ಇಲಾಖೆಗೆ ಕಳುಹಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ಸಿಗದ ಕಾರಣ ಸರ್ಕಾರ ಕೆಲ ಖಾಸಗಿ ಆಸ್ಪತ್ರೆಗಳನ್ನು ಇಎಸ್ಐ ಸೌಲಭ್ಯಕ್ಕೆ ಅನುವು ಮಾಡಿ ಕೊಟ್ಟಿರುತ್ತದೆ. ಈ ಖಾಸಗಿ ಆಸ್ಪತ್ರೆಯವರು ಶಸ್ತ್ರಚಿಕಿತ್ಸೆ ಸೇರಿದಂತೆ ಪ್ರಮುಖ ಚಿಕಿತ್ಸೆಗೆ ಹಣ ಪಡೆಯುವುದಿಲ್ಲ. ಆದರೆ ಕೆಲವೊಮ್ಮೆ ಔಷಧಿಯನ್ನು ಕಾರ್ಮಿಕರಿಂದ ಪಡೆದು ಕೊಂಡು ಚಿಕಿತ್ಸೆ ನೀಡಲಾಗಿರುತ್ತದೆ. ಈ ಔಷಧಿಯ ಹಣವನ್ನು ಚಿಕಿತ್ಸಾಲಯದ ಮೂಲಕ ಕಾರ್ಮಿಕ ಕಲ್ಯಾಣ ಇಲಾಖೆಗೆ ಕಳುಹಿಸಿದರೆ ಅದರ ಹಣ ಸುಮಾರು ಒಂದೂವರೆ ತಿಂಗಳಲ್ಲಿ ವಾಪಸ್ ಆಗುತ್ತದೆ. ಈ ಹಣವನ್ನು ಚಿಕಿತ್ಸಾಲಯದ ಮೂಲಕ ವೈದ್ಯರ ನೆರವಿನಿಂದ ಪಡೆಯಬೇಕು. ಆದ್ರೆ ಹಣವನ್ನು ವೈದ್ಯಾಧಿಕಾರಿ ಡಾ.ಎಸ್.ರಾಜು ಕಾರ್ಮಿಕರಿಗೆ ನೀಡದೆ ತಾವೇ ನುಂಗಿದ್ದಾರೆ ಎಂದು ದೂರಲಾಗಿದೆ.
ಕಾರ್ಮಿಕರ ಹಣ ವಾಪಸ್ ಬರುತ್ತಿಲ್ಲ ಎಂಬ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಜಿಲ್ಲಾ ನೌಕರರ ಸಂಘದ ಕ್ಷೇಮಾಭಿವೃದ್ದಿ ಸಂಘದವರು ಬೆಂಗಳೂರಿನ ಇಎಸ್ಐ ಆಯುಕ್ತರ ಕಚೇರಿಗೆ ಹೋಗಿ ವಿಚಾರಿಸಿದಾಗ, ಅಲ್ಲಿ ಯಾವ ಹಣವು ಬಾಕಿ ಉಳಿಸಿ ಕೊಳ್ಳದೆ ಪಾವತಿಯಾಗಿದೆ ಎಂದು ತಿಳಿದು ಬಂದಿದೆ. ನಂತರ ಈ ಕುರಿತು ಆರ್ಟಿಐ ನಲ್ಲಿ ಮಾಹಿತಿ ಪಡೆದಾಗ ಡಾ.ಎಸ್.ರಾಜು ಅವರ ಭ್ರಷ್ಟಾಚಾರ ಬಯಲಿಗೆ ಬಂದಿದೆ. ಭ್ರಷ್ಟಾಚಾರದ ಬಗ್ಗೆ ಇಲಾಖೆ ತನಿಖೆ ನಡೆಸಿ ವರದಿಯನ್ನು ನೀಡಿದೆ. ಅಲ್ಲದೆ ಡಾ.ಎಸ್.ರಾಜು ಬಗ್ಗೆ ಕ್ರಮ ತೆಗೆದು ಕೊಳ್ಳಬೇಕು ಎಂದು ಶಿಫಾರಸು ಸಹ ಮಾಡಿದೆ. ಆದರೆ ಇದುವರೆಗೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ.
ಡಾ.ಎಸ್.ರಾಜು ಶಿವಮೊಗ್ಗ ಬಿಟ್ಟು ಭದ್ರಾವತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲು ಕಾರ್ಮಿಕರ ಹಣ ವಾಪಸ್ ಮಾಡಿಸಿ, ರಾಜು ಅವರಿಗೆ ಶಿಕ್ಷೆ ನೀಡಬೇಕು ಎಂದು ನೌಕರರ ಕ್ಷೇಮಾಭಿವೃದ್ದಿ ಸಂಘ ಆಗ್ರಹಿಸಿದೆ.