ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾಡಳಿತ ಸೋಂಕಿತರಿರುವ ಪ್ರದೇಶಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕಳುಹಿಸಿ ಪರೀಕ್ಷೆ ನಡೆಸುತ್ತಿದೆ.
ಮೊಬೈಲ್ ಟೀಂ ಮೂಲಕ ಸ್ಲಂಗಳಲ್ಲಿ ಕೋವಿಡ್ ಪರೀಕ್ಷೆ : ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಒಟ್ಟು 59 ಕೋವಿಡ್ ಪರೀಕ್ಷಾ ಟೀಂಗಳನ್ನು ರಚಿಸಿದೆ. ಇದರಲ್ಲಿ ಶಿವಮೊಗ್ಗ ತಾಲೂಕಿಗೆ 39 ಮೊಬೈಲ್ ಟೀಂಗಳನ್ನು ಬಿಡಲಾಗಿದೆ. ಉಳಿದಂತೆ ಜಿಲ್ಲೆಯ 6 ತಾಲೂಕುಗಳಲ್ಲಿ ನಾಲ್ಕರಿಂದ ಐದು ಮೊಬೈಲ್ ಕೋವಿಡ್ ಪರೀಕ್ಷಾ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡವು ಹೆಚ್ಚಾಗಿ ಆಯಾ ಸ್ಲಂ ಅಥವಾ ಬಡಾವಣೆಯ ಸಮೀಪ ಬಂದು ಪರೀಕ್ಷೆ ನಡೆಸುತ್ತದೆ.
ಸ್ಲಂಗಳ ಸಮುದಾಯ ಭವನ ಅಥವಾ ಶಾಲೆಯಲ್ಲಿ ಕೋವಿಡ್ ಪರೀಕ್ಷೆ : ಸ್ಲಂಗಳಲ್ಲಿ ಪರೀಕ್ಷೆ ನಡೆಸುವ ಮುನ್ನಾ ಮೊಬೈಲ್ ಟೀಂ ಪ್ರತಿ ಮನೆ ಮನೆಗೂ ಹೋಗಿ ಸಮುದಾಯ ಭವನ ಅಥವಾ ಶಾಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂಬ ಮಾಹಿತಿ ನೀಡಲಾಗುತ್ತದೆ. ಹೀಗೆ ಬಂದ ಸಾರ್ವಜನಿಕರಿಗೆ ರ್ಯಾಪ್ ಪರೀಕ್ಷೆ ನಡೆಸಲಾಗುತ್ತದೆ. ರ್ಯಾಪ್ ಪರೀಕ್ಷೆಯಲ್ಲಿ ನೆಗಟಿವ್ ಬಂದು ಅವರಲ್ಲಿ ಶೀತ,ಜ್ವರ ಸೇರಿದಂತೆ ಇತರೆ ಲಕ್ಷಣ ಕಂಡು ಬಂದ್ರೆ ಅವರಿಗೆ ಆರ್‌ಟಿಪಿಸಿಆರ್ ಲ್ಯಾಬ್ ಪರೀಕ್ಷೆಗೆ ಕರೆದುಕೊಂಡು ಬರಲಾಗುತ್ತದೆ.
ಹೆಚ್ಚಿನ ಜನ ಭಯದಿಂದ ಪರೀಕ್ಷೆಗೊಳಗಾಗುತ್ತಿಲ್ಲ : ಕೊರೊನಾ ಬಂದ್ರೆ ಅವರನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿಡುತ್ತಾರೆ ಎಂಬ ಭಯದಿಂದ ಹೆಚ್ಚಿನ ಜನ ಪರೀಕ್ಷೆಗೊಳಗಾಗುತ್ತಿಲ್ಲ. ಹೀಗಾಗಿ, ಕೋವಿಡ್ ಮೊಬೈಲ್ ಟೀಂನವರು ಮನೆ ಮನೆಗೆ ಹೋಗಿ ಬಂದ್ರೂ ಸಹ ಶೇ.30ರಷ್ಟು ಜನ ಮಾತ್ರ ಮುಂದೆ ಬಂದು ಪರೀಕ್ಷೆಗೊಳಗಾಗುತ್ತಿದ್ದಾರೆ.
ಕೋವಿಡ್ ಮೊಬೈಲ್ ಟೀಂಗಳು ಗ್ರಾಮ ಮಟ್ಟದಲ್ಲಾದ್ರೆ, ಪಿಡಿಒ ಮೂಲಕ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಅದೇ ರೀತಿ, ನಗರಸಭೆ ಹಾಗೂ ಪಾಲಿಕೆಗಳಾದ್ರೆ, ಸಂಬಂಧ ಪಟ್ಟ ಅಧಿಕಾರಿಗಳ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್ ಪರೀಕ್ಷೆ ಇನ್ನಷ್ಟು ವೇಗವಾಗಿ ನಡೆಯಬೇಕೆಂದು ಡಿಸಿ ಅವರು ಆದೇಶ ಹೊರಡಿಸಿದ್ದಾರೆ.