ಶಿವಮೊಗ್ಗ: ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗದಿಂದ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಸಮಾವೇಶ ನಡೆಸಿದೆ. ನಗರದ ಸೈನ್ಸ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಹಾಲಿ ಹಾಗೂ ಮಾಜಿ ಶಾಸಕರುಗಳು ಭಾಗಿಯಾಗಿದ್ದರು.
ಸಮಾವೇಶದಲ್ಲಿ ಮಾತನಾಡಲು ಸಿದ್ದರಾಮಯ್ಯ ಸ್ಟೇಜ್ಮೇಲೆ ಬರುತ್ತಿದ್ದಂತೆ ಟಗರು ಸಾಂಗ್ ಹಾಕಲಾಯಿತು. ಈ ವೇಳೆ ಸಿದ್ದರಾಮಯ್ಯ ನಗುಮುಖದಿಂದಲೇ ಜನರಿಗೆ ಕೈ ಬೀಸಿದರು. ನಂತರ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದರು. ನಾವು ಅಧಿಕಾರಕ್ಕೆ ಬರ್ತಿವಿ, ಬಿಜೆಪಿ ಸರ್ಕಾರ ಯಾವಾಗ ಬೇಕಾದ್ರು ಬಿದ್ದು ಹೋಗಬಹುದು.ಇದರಿಂದ ಪೊಲೀಸರೇ ಎಚ್ಚರದಿಂದ ಇರಬೇಕು. ಸರ್ಕಾರ ರಚನೆ ಮಾಡಲು ಹಣ ನೀಡಿದಾಗ ಆತ್ಮಸಾಕ್ಷಿ ಇದ್ದರೆ ಅದನ್ನು ಪೊಲೀಸರು ತಡೆಯಬೇಕಿತ್ತು ಎಂದರು.
ಪೊಲೀಸರಿಗೆ ಮಾನ ಮರ್ಯಾದೆ ಇದೆಯೇ?
ಬಿಜೆಪಿ ನಾಯಕರುಗಳು ಅಕ್ರಮವಾಗಿ ಆಸ್ತಿ ಮಾಡಿದಾಗ ಅದನ್ನು ತಡೆಯಬಹುದಾಗಿತ್ತು. ಪೊಲೀಸರೆ ನಿಮಗೆ ಈಶ್ವರಪ್ಪ ತನ್ನ ಮನೆಯಿಂದ ಹಣ ತಂದು ನಿಮಗೆ ಸಂಬಳ ನೀಡಲ್ಲ, ನಿಮಗೆ ಜನರ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತದೆ ಎಂದರು.ನಾವು ಅಧಿಕಾರದಲ್ಲಿದ್ದಾಗ ಯಾರನ್ನು ದುರುಪಯೋಗ ಮಾಡಿ ಕೊಂಡಿಲ್ಲ. ಪೊಲೀಸರೆ ಮೊದಲು 307 ಅಂದ್ರೆ ಏನೂ ಅಂತ ತಿಳಿದು ಕೊಳ್ಳಬೇಕಿತ್ತು. ಭದ್ರಾವತಿ ಘಟನೆಯಲ್ಲಿ ಪೊಲೀಸರು 323 ಹಾಕಬಹುದಾಗಿತ್ತು. ಹಲ್ಲೆ ನಡೆಸಿದ ಬಗ್ಗೆ ನೀವು ವೈದ್ಯರ ಸರ್ಟಿಫಿಕೇಟ್ ತೆಗದುಕೊಂಡು ಕೇಸು ಹಾಕಿದ್ರಾ?. ಪೊಲೀಸರಿಗೆ ಮಾನಮರ್ಯಾದೆ, ಆತ್ಮಸಾಕ್ಷಿ ಇದೆಯೇ ಎಂದು ಕಿಡಿಕಾರಿದರು.
ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಅಧಿಕಾರ ಮಾಡ್ತಾ ಇದ್ದೀರಾ, ಲೂಟಿ ಮಾಡುವುದು ಬಿಟ್ಟು ಏನಾದ್ರೂ ಮಾಡಿದ್ದೀರಾ? ಎಂದರು. ಯಡಿಯೂರಪ್ಪ ಹಾಗೂ ಈಶ್ವರಪ್ಪ ಆಸ್ತಿ ಮಾಡುವುದರಲ್ಲಿ ಕಾಂಪಿಟೇಷನ್ ಮಾಡ್ತಾ ಇದ್ದಾರೆ. ಹಸಿರು ಟವಲ್ ಹಾಕಿಕೊಂಡು ರೈತರ ಮೇಲೆ ಗೋಲಿಬಾರ್ ನಡೆಸಿದ್ರು ಕೂಡ ನಿಮಗೆ ನಾಚಿಕೆ ಆಗೋದಿಲ್ಲವೆ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಮತ್ತೇ ಅಧಿಕಾರಕ್ಕೆ ಬರುತ್ತದೆ :
ನಾನು ಸಿಎಂ ಆದಾಗ ನೀಡಿದ 165 ಭರವಸೆಯನ್ನು ಈಡೇರಿಸಿದ್ದೆ. ಬಿಜೆಪಿ ತನ್ನ ಪ್ರಣಾಳಿಕೆಯನ್ನು ಮರೆತಿದೆ. ರಾಜ್ಯ ಸರ್ಕಾರ ಸಾಲ ತಂದು ಸಂಬಳ ನೀಡುವಂತಾಗಿದೆ. ರಾಜ್ಯದ ಬೊಕ್ಕಸ ಖಾಲಿ ಮಾಡಿದ್ದಾರೆ. ನಿಮಗೆ ಮಾನ ಮಾರ್ಯಾದೆ ಇದ್ದರೆ ಅಧಿಕಾರದಲ್ಲಿ ಇರಬಾರದು. ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಅಷ್ಟೆ ಸತ್ಯ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದ ಅವರು, ಸಂಗಮೇಶ್ ನೀವು ಧೈರ್ಯವಾಗಿರಿ, ನಾವು ನಿಮ್ಮ ಜೊತೆಗಿದ್ದೇವೆ. ನಮ್ಮ ಕಾರ್ಯಕರ್ತರನ್ನು ಬಂಧನ ಮಾಡಿದ್ರೆ ಪೊಲೀಸರೆ ಎಚ್ಚರ ನಾವು ಬಂದು ನಿಮ್ಮ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.
ಇದಕ್ಕೂ ಮೊದಲು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಜೈಲಿಗೆ ಹೋದಾಗ ಶಿವಮೊಗ್ಗ ಜಿಲ್ಲೆಯ ಜನರೇ ಮೊದಲು ಪ್ರತಿಭಟನೆ ನಡೆಸಿದ್ದು, ಇದರಿಂದ ಜಿಲ್ಲೆಯ ಮೇಲೆ ನನಗೆ ವಿಶೇಷ ಪ್ರೀತಿ ಇದೆ ಎಂದರು.
ನಾನು ಬಂಗಾರಪ್ಪನವರ ನಾಯಕತ್ವದಲ್ಲಿ ಬೆಳೆದು ಬಂದವ, ಅವರ ಪುತ್ರ ಮಧು ಬಂಗಾರಪ್ಪ ಯಾವುದೇ ಶರತ್ತು ಇಲ್ಲದೆ ಪಕ್ಷಕ್ಕೆ ಬರುತ್ತಿದ್ದಾರೆ. ಇಂದಿನ ಪ್ರತಿಭಟನೆಯ ಮೂಲಕ ನಾವು ನಮ್ಮ ಹೋರಾಟವನ್ನು ಪ್ರಾರಂಭ ಮಾಡ್ತಾ ಇದ್ದೇವೆ ಎಂದು ತಿಳಿಸಿದರು.
ಪೊಲೀಸರ ವಿರುದ್ಧ ಪರಂ ಕಿಡಿ:
ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡುವಾಗ ಕೆಪಿಸಿಸಿ ಕಡೆಯಿಂದ ದ್ರೋಣ್ ಹಾರಿಸಲು ಹೋದಾಗ ಪೊಲೀಸರು ತಡೆಯೊಡ್ಡಿದರು. ಈ ವೇಳೆ ಪರಮೇಶ್ವರ್ ಪೊಲೀಸರ ವಿರುದ್ಧ ಗರಂ ಆದರು. ಯಾಕೆ ತಡೆಯುತ್ತಿರಿ ಎಂದು ಪ್ರಶ್ನೆ ಮಾಡಿದರು.