ಶಿವಮೊಗ್ಗ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ 10 kg ಅಕ್ಕಿ ಕೊಡಬೇಕು. ಈಗಾಗಲೇ ಕೇಂದ್ರ ಸರ್ಕಾರ 5 ಕೆ ಜಿ ಅಕ್ಕಿ ಕೊಡುತ್ತಿದೆ. ಇನ್ನೂ 10 ಕೆಜಿ ಅಕ್ಕಿ ಕೊಡೋದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ನೀವು (ಕಾಂಗ್ರೆಸ್) ಎಷ್ಟು ಅಕ್ಕಿ ಕೊಡ್ತೀರಾ, ಎಲ್ಲಿಂದ ತರ್ತೀರಾ ಅನ್ನೋದು ನಿಮಗೆ ಬಿಟ್ಟಿದ್ದು. ನೀವು 20 kg ಅಕ್ಕಿ ಕೊಡ್ತೀವಿ ಅಂತಾ ಪ್ರಣಾಳಿಕೆಯಲ್ಲಿ ಹೇಳಿದ್ರೆ, ಮೋದಿ ಸರ್ಕಾರ ಕೊಡಲಿಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಮೋದಿ ಅವರ ಒಪ್ಪಿಗೆ ಪಡೆದು ನೀವು ಈ ಘೋಷಣೆ ಮಾಡಿದ್ದೀರಾ? ನೀವು ಹೇಳಿದಂತೆ 15 ಕೆಜಿ ಕೊಡಿ ಎಂದು ಆಗ್ರಹಿಸಿದ ಈಶ್ವರಪ್ಪ, ನೀವು ಎಲ್ಲಿಂದಲಾದರೂ ಅಕ್ಕಿ ತಂದು ಕೊಡಬೇಕು. ಅಕ್ಕಿ ಇಲ್ಲ ಅಂದ್ರೆ ನಿಮ್ಮ ಕಡೆ ದುಡ್ಡು ಇದೆಯಲ್ಲಾ, ಜನರಿಗೆ ದುಡ್ಡು ಕೊಡಿ. ಕಾಂಗ್ರೆಸ್ ನವರು ಅಕ್ಕಿ ಕೊಡದಿದ್ದರೆ ಬಡವರ ಪರ ಬಿಜೆಪಿ ಬೀದಿಗೆ ಇಳಿದು ಹೋರಾಟ ಮಾಡುತ್ತದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂಬ ಭಂಡತನದ ಮಾತು ಇದು ರಾಜ್ಯದ ಬಡವರಿಗೆ ಮಾಡುತ್ತಿರುವ ಮೋಸವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ರಾಜ್ಯದಲ್ಲಿ ಮೋಸದ ಮುಖಾಂತರ ಅಧಿಕಾರಕ್ಕೆ ಬಂದಿದೆ. ಈ ಮೋಸತನ ರಾಜ್ಯದಲ್ಲಿ ಬಹಳ ದಿನ ನಡೆಯುವುದಿಲ್ಲ. ರಾಜ್ಯದ ಯಾವೊಬ್ಬ ಪದವೀಧರರಿಗೆ ಒಂದು ರೂಪಾಯಿ ಕೊಟ್ಟಿಲ್ಲ. ನೀವು ನಿರುದ್ಯೋಗಿ ಪದವೀಧರರಿಗೆ ಮೋಸ ಮಾಡಿದ್ದೀರಿ. ಪದವೀಧರರು ಈ ವರ್ಷ ಪಾಸ್ ಆಗಿರಬೇಕು ಅಂತಾ ಈಗ ಹೇಳುತ್ತಿದ್ದಿರಾ. ಹಿಂದಿನವರಿಗೆ ನಿರುದ್ಯೋಗ ಭತ್ಯೆ ಕೊಡ್ತೀವಿ ಎಂದು ಹೇಳಿದ್ರಿ. ಈಗ ಪದವೀಧರರಿಗೆ ಹೇಳಿದಂತೆ ಹಣ ಕೊಡಬೇಕು. ಹಣ ಕೊಡಲಿಲ್ಲ, ಅಕ್ಕಿ ಕೊಡಲು ಆಗ್ತಿಲ್ಲ, 200 ಯೂನಿಟ್ ವಿದ್ಯುತ್ ಕೊಡ್ತೀವಿ ಅಂತೇಳಿ ವಿದ್ಯುತ್ ದರ ಹೆಚ್ಚಿಗೆ ಮಾಡಿದ್ದೀರಾ. ಮೊದಲ ಕ್ಯಾಬಿನೆಟ್ನಲ್ಲಿ ಎಲ್ಲಾ ಗ್ಯಾರಂಟಿ ಈಡೇರಿಸುತ್ತೇವೆ ಅಂತಾ ಹೇಳಿದ್ದಿರಿ. ಇದುವರೆಗೂ ಯಾವ ಭರವಸೆ ಈಡೇರಿಸಿಲ್ಲ. ಹಾಗಾಗಿ ಬಡವರು, ಯುವಕರು, ಮಹಿಳೆಯರ ಪರ ಬಿಜೆಪಿ ಹೋರಾಟ ಮಾಡಲಿದೆ ಎಂದು ಈಶ್ವರಪ್ಪ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವ ಮೂಲಕ ಬಹುಸಂಖ್ಯಾತರಿಗೆ ಮೋಸ ಮಾಡಲು ಹೊರಟಿದ್ದೀರಿ. ಇದು ಸರಿಯಲ್ಲ. ಮತಾಂತರ ಕಾಯ್ದೆ ವಿರುದ್ಧ ನಮ್ಮ ಪಕ್ಷ ಸದನದಲ್ಲಿ ಹೋರಾಟ ನಡೆಸುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ವಿಚಾರ: ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಎಂಬ ಕುರಿತು ಮಾತನಾಡಿದ ಈಶ್ವರಪ್ಪನವರು, ಅದು ಆ ಪಕ್ಷದ ವಿಚಾರ, ಮಹದೇವಪ್ಪ, ಎಂ ಬಿ ಪಾಟೀಲ್, ಡಿ ಕೆ ಸುರೇಶ್ ಏನು ಹೇಳ್ತಾರೋ ಸಂಬಂಧ ಇಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಐದು ವರ್ಷ ಇರುತ್ತಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಇಲ್ಲವೇ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯುವ ಕುರಿತು ಶಾಸಕರಿಗೂ ಗೊಂದಲ, ಮಂತ್ರಿಗಳಿಗೂ ಗೊಂದಲ ಹಾಗೂ ರಾಜ್ಯದ ಜನರಿಗೂ ಗೊಂದಲವಾಗಿದೆ. ಈ ಗೊಂದಲ ಇಟ್ಟುಕೊಳ್ಳಬೇಡಿ. ಸಿದ್ದರಾಮಯ್ಯ ಐದು ವರ್ಷ ಆಡಳಿತ ಮುಂದುವರಿಸಿದರೆ ನಮ್ಮ ಅಭ್ಯಂತರ ಇಲ್ಲ ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ರದ್ದು ವಿರುದ್ಧ ವಿಎಚ್ಪಿ ಪ್ರತಿಭಟನೆ: ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ಕಾಯ್ದೆಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಇಂದು ಜಿಲ್ಲಾ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿದರು.
ನಗರದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ವಿಶ್ವ ಹಿಂದು ಪರಿಷತ್ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾಂತರ ಓಲೈಕೆಗೆ ಮುಂದಾಗಿದೆ. ಇದು ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತಿದೆ. ಹಿಂದುಗಳು ಗೋವಿನಲ್ಲಿ ಮುಕ್ಕೋಟಿ ದೇವತೆಗಳನ್ನು ಕಾಣುತ್ತಿದ್ದೇವೆ. ಆದರೆ, ಅಂತಹ ಗೋವುವನ್ನು ಕೊಲ್ಲಲು ಕಾಯ್ದೆ ಬದಲಾವಣೆ ಮಾಡಿದ್ದಾರೆ. ಇದು ಅನ್ಯಾಯ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಅಲ್ಲದೇ ಮತಾಂತರ ಕಾಯ್ದೆಯನ್ನು ರದ್ದು ಮಾಡುವ ಮೂಲಕ ಮತಾಂತರಕ್ಕೆ ಮತ್ತೆ ಅನುವು ಮಾಡಿಕೊಟ್ಟಂತೆ ಆಗಿದೆ. ಇದರಿಂದ ತಕ್ಷಣ ಎರಡು ಕಾಯ್ದೆ ಎಂದಿನಂತೆ ಮುಂದುವರೆಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಶಿಕಾರಿಪುರದಲ್ಲೂ ಪ್ರತಿಭಟನೆ: ಗೋ ಹತ್ಯೆ ನಿಷೇಧ , ಮತಾಂತರ ನಿಷೇಧ ಕಾಯ್ದೆ ರದ್ಧತಿ ವಿರೋಧಿಸಿ ಶಿಕಾರಿಪುರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ. ವೈ. ವಿಜಯೇಂದ್ರ ಭಾಗವಹಿಸಿದ್ದರು.
ಇದನ್ನೂಓದಿ:ಮತ್ತೊಮ್ಮೆ ಹುಧಾ ಪಾಲಿಕೆ ಗದ್ದುಗೆ ಉಳಿಸಿಕೊಂಡ ಬಿಜೆಪಿ: ಮೇಯರ್ ವೀಣಾ, ಉಪಮೇಯರ್ ಸತೀಶ್ ಆಯ್ಕೆ