ಶಿವಮೊಗ್ಗ: ಕಾಂಗ್ರೆಸ್ ಪಕ್ಷಕ್ಕೆ ಕ್ಯಾನ್ಸರ್ ರೋಗ ಬಂದಿದೆ, ಇದಕ್ಕೆ ಔಷಧಿಯೇ ಇಲ್ಲ. ಈ ಕಾಯಿಲೆಯಿಂದಲೇ ಕಾಂಗ್ರೆಸ್ ನಾಶವಾಗುತ್ತೆ ಎಂದು ಕಾಂಗ್ರೆಸ್ ವಿರುದ್ದ ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷದ ಕುರಿತು ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ರಾಜ್ಯ ಕಾಂಗ್ರೆಸ್ ಇತಿಹಾಸ ತೆಗೆದು ನೋಡಿದ್ರೆ, ಆ ಪಕ್ಷದಲ್ಲಿಯೇ ಮೂರು ಮೂರು ಜನ ಸಿಎಂ ಬದಲಾವಣೆ ಮಾಡಿದ್ದು ನೋಡಿದ್ದೇವೆ. ವಿರೇಂದ್ರ ಪಾಟೀಲರಂತಹ ಪ್ರಾಮಾಣಿಕ ಸಿಎಂ ರನ್ನೇ ಅಂದಿನ ಪಿಎಂ ರಾಜೀವ್ ಗಾಂಧಿ ಅವರು ಏರ್ಪೋರ್ಟ್ನಲ್ಲಿ ಬದಲಾವಣೆ ಮಾಡಿದ್ದನ್ನು ನೋಡಿದ್ದೇವೆ.
ಸಿದ್ದರಾಮಯ್ಯ ಸಿಎಂ ಆದಾಗ ಕಾಂಗ್ರೆಸ್ನಲ್ಲಿ ಸಾಕಷ್ಟು ಗುಂಪುಗಾರಿಕೆ ಇತ್ತು. ಇಷ್ಟು ಗುಂಪುಗಾರಿಕೆ ಬೇರೆ ಯಾರ ಅವಧಿಯಲ್ಲೂ ಆಗಿರಲಿಲ್ಲ. ಇದಕ್ಕೆ ಸಾಕ್ಷಿಯಾಗಿ ಚುನಾವಣಾ ಫಲಿತಾಂಶದಲ್ಲಿ ಸೋತ್ರು. ಅದೇ ರೀತಿ ಮಂತ್ರಿಗಳಾದವರು ಅಡ್ರಸ್ಗೆ ಇಲ್ಲದಂತೆ ಹೋದ್ರು. ಕಳೆದ ಲೋಕಸಭ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಒಂದು ಕ್ಷೇತ್ರವನ್ನು ಗೆಲ್ಲಲು ಮಾತ್ರ ಸಾಧ್ಯವಾಯಿತು ಎಂದರು.
ಸಿಎಂ ಆಗಿ ಯಡಿಯೂರಪ್ಪನವರು ಇದ್ದಾರೆ, ಅವರೇ ಮುಂದುವರೆಯುತ್ತಾರೆ. ಅಲ್ಲೊಬ್ಬ, ಇಲ್ಲೊಬ್ಬ ಶಾಸಕರು ಹಾಗೂ ಮಂತ್ರಿಗಳು ಮಾತನಾಡಿದ್ರೆ, ಅದು ಬಿಜೆಪಿಗೆ ಬಂದ ರೋಗ ಆಗಲ್ಲ. ಬದಲಿಗೆ ಕಾಂಗ್ರೆಸ್ನದು ಕ್ಯಾನ್ಸರ್ ರೋಗ, ಅದಕ್ಕೆ ಔಷಧವೇ ಇಲ್ಲ, ಇನ್ನೂ ಕಂಡು ಹಿಡಿಯಬೇಕಿದೆ ಎಂದರು.
ಸಿದ್ದರಾಮಯ್ಯನವರು ಸಿಎಂ ಆದಾಗ ಕಾಂಗ್ರೆಸ್ ಪಕ್ಷದ ಮಂತ್ರಿ ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಲುಕಿಕೊಂಡಿರಲಿಲ್ಲವೇ. ಸಿಎಂ ಆದಿದ್ದಾಗ ಮೇಟಿಯನ್ನು ರಕ್ಷಣೆ ಮಾಡಲಿಲ್ಲವೆ. ನಮ್ಮ ಗೃಹ ಸಚಿವರ ಮೇಲೆ ಆಪಾದನೆ ಮಾಡಿದ್ದಾರಷ್ಟೆ. ಸೆಕ್ಸ್ ಹಗರಣದಲ್ಲಿ ಇದ್ದ ಮೇಟಿಯನ್ನು ರಕ್ಷಣೆ ಮಾಡಲಿಲ್ಲ ಅಂತ ಬಹಿರಂಗವಾಗಿ ಹೇಳಲಿ ನೋಡೋಣ ಎಂದರು.
ಕೋವಿಡ್ ತಡೆಯಲು ನಮ್ಮ ಸರ್ಕಾರ ಶಕ್ತಿ ಮೀರಿ ಪ್ರಯತ್ನ ಮಾಡ್ತಾ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಾ ಇದೆ. ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ತೃಪ್ತಿ ಆಗುತ್ತಿಲ್ಲ ಎಂದರು.