ಶಿವಮೊಗ್ಗ: ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಷ್ಟು ಅತಿವೃಷ್ಠಿಯುಂಟಾಗಿದ್ದು, ಇದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ಎಸ್ ಸುಂದರೇಶ್ ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾಗಿ ಸಾಕಷ್ಟು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಿದ್ದಾರೆಯೇ ವಿನಃ ಅದು ವಿತರಣೆ ಆಗುತ್ತಿಲ್ಲ ಎಂದು ದೂರಿದರು. ನಗರ ಒಂದರಲ್ಲಿಯೇ ಸಾವಿರಾರು ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರವನ್ನು ಪಕ್ಷದ ವತಿಯಿಂದ ಕೊಟ್ಟಿದೆ ಆದರೆ ರಾಜ್ಯ ಸರ್ಕಾರದಿಂದ ನೆರೆ ಪರಿಹಾರ ಪೀಡಿತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿದೆ ಇದರ ಬಗ್ಗೆ ಕೇಂದ್ರ ಸರಕಾರ ಯಾವುದೇ ಗಮನ ಹರಿಸುತ್ತಿಲ್ಲ ಎಂದು ದೂರಿದರು. ದೇಶದ 12 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭೀಕರ ಪ್ರವಾಹ ಇದೆ. ಆದರೂ ಸಹ ನರೇಂದ್ರ ಮೋದಿಯವರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯದಲ್ಲಿನ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೂಡಲೇ ಎರಡು ಸಾವಿರ ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.