ಶಿವಮೊಗ್ಗ: ತಾಲೂಕಿನ ಜನತೆ ತಂದೆ - ತಾಯಿಯ ಸ್ಥಾನದಲ್ಲಿ ನಿಂತು ಚುನಾವಣೆಯಲ್ಲಿ ಅತ್ಯಂತ ಯಶಸ್ಸು ತಂದು ಕೊಡುವ ಮೂಲಕ ತಂದೆ-ತಾಯಿಯ ಕೊರತೆಯನ್ನು ನೀಗಿಸಿದ್ದಾರೆ. ಅವರಿಗೆ ತಾನೆಂದು ಚಿರಋಣಿಯಾಗಿದ್ದೇವೆ. ಹಾಗಾಗಿ ಅಭಿನಂದನೆ ನನಗಲ್ಲ. ಸೊರಬ ತಾಲೂಕಿನ ಜನತೆಗೆ ಸಲ್ಲಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಸೊರಬ ತಾಲೂಕಿನ ರಂಗಮಂದಿರ ಆವರಣದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನನ್ನ ರಾಜಕೀಯ ಜೀವನದಲ್ಲಿ ಗೆಲುವು ಸಾಧಿಸಿದ್ದಕ್ಕಿಂತ ಸೋಲಿನ ಕಹಿ ಅನುಭವವೇ ಹೆಚ್ಚಿದೆ. ಎಸ್. ಬಂಗಾರಪ್ಪ ಜೀವಂತವಾಗಿದ್ದಾಗಲೇ ನಾನು ಸೋಲು ಕಂಡಿದ್ದೇನೆ. ತಂದೆಯವರು ತಮ್ಮನ್ನು ಶಾಸಕರನ್ನಾಗಿ ಮತ್ತು ರಾಜಕೀಯ ರಂಗದಲ್ಲಿ ಉನ್ನತ ಹುದ್ದೆಯಲ್ಲಿ ನೋಡಬೇಕು ಎನ್ನುವ ಆಸೆ ಕಟ್ಟಿಕೊಂಡಿದ್ದರು.
ಸೋಲುಗಳ ಸರಮಾಲೆಯನ್ನೇ ಹೊತ್ತಿದ್ದ ನನ್ನನ್ನು ತಾಲೂಕಿನ ಜನತೆ ಕೈ ಬಿಡಲಿಲ್ಲ. ಮುಂದೆ ತಾಲೂಕಿನ ಇತಿಹಾಸದಲ್ಲಿ ಬರೆದಿಡುವಂತಹ ದಾಖಲೆಯ ಅಂತರದ ಜಯ ತಂದುಕೊಟ್ಟು ಸೋಲಿನ ಕಹಿಯನ್ನು ಮೆರೆಯುವಂತೆ ಮಾಡಿದ್ದಾರೆ. ಮತ್ತು ತಂದೆ - ತಾಯಿ ಇಲ್ಲದ ಕೊರತೆಯನ್ನು ನೀಗಿಸಿ ಎಸ್. ಬಂಗಾರಪ್ಪ ಅವರ ಕನಸನ್ನು ನನಸು ಮಾಡಿದ್ದಾರೆ. ಅವರ ಋಣ ಎಂದಿಗೂ ತೀರಿಸಲಾಗದು ಎಂದರು.
ರಾಜ್ಯದಲ್ಲಿ ತಂದೆಯವರ ರಾಜಕೀಯ ಶಕ್ತಿ ಹೇಗಿದೆ ಎಂದರೆ ಎಸ್. ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಎಂದು ಗರುರ್ತಿಸಿ ಗೌರವಿಸುತ್ತಾರೆ. ಇಂತಹ ಸ್ಥಾನಮಾನಕ್ಕೆ ತಾಲೂಕಿನ ಜನತೆಯೇ ಕಾರಣ. ಅವರಿಗೆ ಚ್ಯುತಿ ಬಾರದ ಹಾಗೆ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಅವರು, ತಾಲೂಕಿನಲ್ಲಿರುವ ಬಗರ್‌ಹುಕುಂ ಸಮಸ್ಯೆಯನ್ನು ಪರಿಹರಿಸುವಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು. ಉದ್ಯೋಗಕ್ಕಾಗಿ ಇತರ ತಾಲೂಕು ಮತ್ತು ರಾಜಧಾನಿಗೆ ತೆರಳುವುದನ್ನು ತಪ್ಪಿಸಲು ಗಾರ್ಮೆಂಟ್ಸ್ ಮತ್ತು ಉದ್ಯಮವನ್ನು ಸ್ಥಾಪಿಸುವ ವ್ಯವಸ್ಥೆ ಮಾಡಲಾಗುವುದು ಮತ್ತು ಸರ್ಕಾರಿ ಬಸ್‌ಗಳ ಸೇವೆಯನ್ನು ಹೆಚ್ಚು ಮಾಡಲಾಗುವುದು ಎಂದು ತಿಳಿಸಿದರು.
ಎಸ್. ಬಂಗಾರಪ್ಪ ಅವರ ಹಿರಿಯ ಪುತ್ರಿ ಸುಜಾತ ತಿಲಕ್‌ಕುಮಾರ್ ಮಾತನಾಡಿ, ಮಧು ಬಂಗಾರಪ್ಪ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಲು ತಾಲೂಕಿನ ಜನತೆ ಕಾರಣರಾಗಿದ್ದು, ವಿಶ್ವಾಸದಿಂದ ನೀಡಿದ ಮತಕ್ಕೆ ಚ್ಯುತಿ ಬಾರದ ಹಾಗೆ ನಿಬಾಯಿಸುವುದು ನಿಮ್ಮ ಜವಾಬ್ದಾರಿ. ಜನತೆಯ ಭಾರವನ್ನು ಹೊತ್ತುಕೊಂಡು ತಾಲೂಕನ್ನು ಅಭಿವೃದ್ಧಿಯ ಪಥದೆಡೆಗೆ ಸಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಮಧು ಬಂಗಾರಪ್ಪ ಅವರಿಗೆ ಕಿವಿಮಾತು ಹೇಳಿದ ಅವರು, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಯನ್ನು ಮುಚ್ಚದೇ ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ಹರಿಸಬೇಕು.
ಅಲ್ಲದೇ ರಾಜ್ಯದಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಬೇಕು ಎಂದು ಮನವಿ ಮಾಡಿ, ಶಾಸಕರಾಗಿ, ಸಚಿವರನ್ನಾಗಿ ರೂಪಿಸಿರುವ ತಾಲೂಕಿನ ಜನತೆಯ ಆಶೀರ್ವಾದವಿದ್ದರೆ ತಂದೆಯವರಂತೆ ಮುಂದೆ ಮಧು ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯೂ ಆಗಬಹುದು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗೀತಾ ಶಿವರಾಜ್‌ಕುಮಾರ್, ಅನಿತಾ ಮಧು ಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ತಾಲೂಕು ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಪಾಟೀಲ್ ಬಿಳಗಲಿ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಉಪಸ್ಥಿತರಿದ್ದರು.
ಇದನ್ನೂ ಓದಿ: ಉಸ್ತುವಾರಿ ಸಚಿವರ ನೇಮಕದಲ್ಲಿ ಗೊಂದಲ ಇದ್ದೇ ಇರುತ್ತೆ: ಎಸ್ ಎಸ್ ಮಲ್ಲಿಕಾರ್ಜುನ್