ಶಿವಮೊಗ್ಗ : ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಎಂಬವರು ಶಿವಮೊಗ್ಗದ ವಿನೋಬಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಂದ್ರಯಾನ ಯಶಸ್ಸಿಗೆ ಪೂಜೆ ಮಾಡಿಸಿ ಫೊಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ ಸೂಲಿಬೆಲೆ ಪೋಸ್ಟ್‌ಗೆ, ಸೌಗಂಧಿಕ ರಘುನಾಥ್ ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್ಗೆ ಸೂಲಿಬೆಲೆ ಅವಹೇಳಕಾರಿಯಾಗಿ ಪ್ರತಿಕ್ರಿಯಿಸಿದ್ದು, ಇದು ಸ್ತ್ರೀ ನಿಂದನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
"ಚಂದ್ರಯಾನ ಯಶಸ್ಸಿಗೆ ದೇವರಿಗೆ ಕೈ ಮುಗಿದು ಫೊಟೋ ಹಾಕಿ ಎಂದು ಸೂಲಿಬೆಲೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಆಗಸ್ಟ್ 23ರಂದು ನನ್ನ ಅಧಿಕೃತ ಖಾತೆಯಿಂದ ಕಾಮೆಂಟ್ ಮಾಡಿ, ದೇವಸ್ಥಾನಕ್ಕೆ ಪೂಜೆ ಮಾಡೋದು ತಪ್ಪಲ್ಲ, ಆದರೆ ಫೊಟೋ ಹಾಕಿ ಅಂತ ಹೇಳಿರೋದು ತಪ್ಪು. ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು ಎಂದು ಕಾಮೆಂಟ್ ಹಾಕಿರುವುದಾಗಿ ಸೌಗಂಧಿಕ ರಘುನಾಥ್ ಹೇಳಿದ್ದಾರೆ.
"ದೇವರಿಗೆ ಪೂಜೆ ಮಾಡುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ ಸೂಲಿಬೆಲೆ ಅವರು ತೋರ್ಪಡಿಕೆಯ ಫೊಟೋ ಹಾಕಿ ಎಂದಿದ್ದಕ್ಕೆ, ನಾನು ಸಭ್ಯವಾಗಿ ಕಾಮೆಂಟ್ ಮಾಡಿದ್ದೆ. ಈ ಕಾಮೆಂಟ್ ಹಾಕಿದ ಬಳಿಕ ಸಾಕಷ್ಟು ಫೇಕ್ ಅಕೌಂಟ್‌ಗಳಿಂದ ನನ್ನ ತೇಜೋವಧೆ ನಡೆದಿದೆ. ನಾನು ಯಾವುದಕ್ಕೂ ಸೊಪ್ಪು ಹಾಕೋದಿಲ್ಲ. ಸ್ವತಃ ಸೂಲಿಬೆಲೆ ಅವರು ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ. ಹೆಣ್ಣು ನಿಂದನೆಯ ಅಸಭ್ಯ ಕಾಮೆಂಟ್ಗೆ ನಾನೂ ಪ್ರತಿಕ್ರಿಯಿಸಿ, ಸೂಲಿಬೆಲೆ ದೊಡ್ಡ ಭಾಷಣಕಾರನಾಗಿ, ಮಾತೃ ಪ್ರೀತಿಯಿಂದಲೂ ಬೆಳೆದು ಈ ರೀತಿ ಕಾಮೆಂಟ್ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದೆ".
"ಸುಳ್ಳು ಭಾಷಣ ಮಾಡಿ, ಜನರನ್ನು ಧರ್ಮದ ಹೆಸರಲ್ಲಿ ದಿಕ್ಕು ತಪ್ಪಿಸುವುದನ್ನು ಬಿಡಬೇಕು. ಹೆಣ್ಣುಮಕ್ಕಳಿಗೆ ಮರ್ಯಾದೆ ಕೊಡಬೇಕು. ಅವರು ಆ ಕಾಮೆಂಟ್ ಡಿಲೀಟ್ ಮಾಡಿದ ಮೇಲೆ ಫೇಕ್ ಅಕೌಂಟ್ ಮೂಲಕ ಸ್ಕ್ರೀನ್ ಶಾಟ್ ಬಳಸಿ ತೇಜೋವಧೆ ಮಾಡಿಸಿದ್ದಾರೆ.ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುವ ದೊಡ್ಡಗುಣ ಸೂಲಿಬೆಲೆಗೆ ಇಲ್ಲ. ಇಂತಹ ಸ್ತ್ರೀ ನಿಂದಕ ಸೂಲಿಬೆಲೆಯ ಮಾತುಗಳನ್ನು ಜನ ನಂಬುವುದು ನಾಚಿಕೆಗೇಡಿನ ವಿಷಯ. ಹಾಗಾಗಿ ಸೂಲಿಬೆಲೆ ವಿರುದ್ಧ ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ" ಎಂದು ಸೌಗಂಧಿಕ ರಘುನಾಥ್ ತಿಳಿಸಿದರು.
ಸೂಲಿಬೆಲೆ ವಿರುದ್ಧದ ಪ್ರಕರಣ ರದ್ದು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ 2022 ರ ಜುಲೈ 28ರಂದು ಜೆ.ಸಿ. ರಸ್ತೆಯ ಟೌನ್ ಹಾಲ್ ಮುಂಭಾಗ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6:30ರವರೆಗೆ ಹಿಂದು ಹಿತರಕ್ಷಣಾ ಸಮಿತಿ ಮತ್ತು ಇತರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ 'ಜಿಹಾದಿಗಳಿಗೆ ಧಿಕ್ಕಾರ, ಪಿಎಸ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಪ್ರವೀಣ್ ನೆಟ್ಟಾರು ಹಂತಕರನ್ನು ಸಾರ್ವಜನಿಕವಾಗಿ ಎನ್‌ಕೌಂಟರ್ ಮಾಡಬೇಕು' ಎಂದು ಘೋಷಣೆ ಕೂಗಿದ್ದರು.
ಎಸ್.ಜೆ.ಪಾರ್ಕ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಆರ್.ಸತೀಶ ಅವರು ನಗರದ 6ನೇ ಎಸಿಎಂಎಂ ನ್ಯಾಯಾಲಯದಲ್ಲಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ದೂರು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ ನೀಡಿತ್ತು.
ಇದನ್ನೂ ಓದಿ : ಹಿಂದೂ ಸಮಾಜವನ್ನು ಹೆದರಿಸುವ, ಬೆದರಿಸುವ ಕೆಲಸ ನಡೆಯುತ್ತಿದೆ: ಚಕ್ರವರ್ತಿ ಸೂಲಿಬೆಲೆ