ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂ ಮಾಡಿದ ಆರೋಪದ ಮೇಲೆ ಬಜರಂಗ ದಳ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಸೇರಿದಂತೆ 10 ಜನರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಶನಿವಾರ ಅ. 22ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ನಗರದ ಕ್ಲಾರ್ಕ್ ಪೇಟೆಯಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರು ಜಖಂ ಮಾಡಲಾಗಿದೆ. ಈ ಘಟನೆಗೆ ಅಶ್ವಿನಿ ಸೇರಿದಂತೆ ಇತರರು ಕಾರಣ ಎಂದು ಕಾರಿನ ಮಾಲೀಕ ಸೈಯದ್ ಪರ್ವಿಜ್ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ.
ಕಾರನ್ನು ಕ್ಲಾರ್ಕ್ ಪೇಟೆಯ ಮಸೀದಿ ಬಳಿ ತಮ್ಮ ಮನೆ ಮುಂದೆ ನಿಲ್ಲಿಸಲಾಗಿತ್ತು. ಅ. 22ರಂದು ಸೀಗೆಹಟ್ಟಿ ಕಡೆಯಿಂದ ಬೈಕ್ನಲ್ಲಿ ಬಂದ ಯುವಕರು ಕೇಸರಿ ಬಾವುಟ ಹಿಡಿದು ಜೈ ಶ್ರೀರಾಮ್ ಎಂದು ಘೋಷಣೆ ಹಾಕುತ್ತ, ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಹಿಂಬದಿಯ ಮಡ್ ಗಾರ್ಡ್ ಜಖಂ ಮಾಡಿದ್ದಾರೆ. ಇದರಿಂದ ತಮಗೆ 15 ಸಾವಿರ ರೂಪಾಯಿ ನಷ್ಟ ಉಂಟಾಗಿದೆ ಎಂದು ದೂರು ನೀಡಿದ್ದಾರೆ.
ಕಾರಿಗೆ ಹಾನಿಯನ್ನುಂಟು ಮಾಡಿದ ಅಶ್ವಿನಿ ಹಾಗೂ ಇತರ 10 ಮಂದಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸೈಯದ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ನೀಡಿದ್ದಾರೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಯ ಕತ್ತು ಸೀಳಿ ಕೊಂದ ಪಾಗಲ್ಪ್ರೇಮಿ!