ಶಿವಮೊಗ್ಗ: ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ನಡುವೆ ತೀವ್ರ ಮಾತಿನ ಜಟಾಪಟಿಯೇ ನಡೆಯಿತು.
ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸಿ ತಮ್ಮಣ್ಣನವರು ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡಲು ಶರಾವತಿ ನಗರದ ಆದಿಚುಂಚನಗಿರಿ ಶಾಲೆ ಎದುರು ಬಂದಿದ್ದರು. ಆಗ ಆಯನೂರು ಮಂಜುನಾಥ್, ಸ್ಮಾರ್ಟ್ ಸಿಟಿ ಕಾಮಗಾರಿ ನೆಪದಲ್ಲಿ ಜನ ಸಾಮಾನ್ಯರಿಗೆ ತೊಂದರೆ ನೀಡಲಾಗುತ್ತಿದೆ. ಜನರಿಗೆ ಕೆಲಸ ಮಾಡಿ ಕೊಡಿ ಅಂದರೆ ಕಮೀಷನರ್ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡರು. ನಗರದಲ್ಲಿ ಬೀದಿ ದೀಪದ ಕಂಬವಿದೆ. ಆದರೆ, ಅದರಲ್ಲಿ ಲೈಟ್‌ಗಳಿಲ್ಲ ಅಂತಾ ಕೇಳಿದ್ರೇ ಕಾಮಗಾರಿ ನೆಪ ಹೇಳುತ್ತಾರೆ. ಕಮಿಷನರ್ ಒಂದು ರಾತ್ರಿ ಆ ಜಾಗದಲ್ಲಿ ಇದ್ದು ನೋಡಲಿ, ಆಗ ಜನರ ಕಷ್ಟ ತಿಳಿಯುತ್ತದೆ ಎಂದರು. ಮಾತಾಡುವ ಭರದಲ್ಲಿ ನೀನು.. ಅಂತಾ ಮಹಿಳಾ ಅಧಿಕಾರಿ ಮೇಲೆ ಏರುದನಿಯಲ್ಲೇ ಮಾತಾಡಿದರು. ಇದರಿಂದ ಕೆರಳಿದ ಪಾಲಿಕೆ ಕಮಿಷನರ್ ಚಾರುಲತಾ ಸೋಮಲ್, ಆಯನೂರು ಮಂಜುನಾಥ್ ವಿರುದ್ಧವೇ ಗರಂ ಆಗಿದರು. ಏಕ ವಚನದಲ್ಲಿ ಮಾತನಾಡಬೇಡಿ, ನಿಮ್ಮ ವಿರುದ್ಧವೇ ಕ್ರಮಕೈಗೊಳ್ಳಬೇಕಾಗುತ್ತೆ ಅಂತಾ ಬೆರಳು ತೋರಿಸುತ್ತಲೇ ಆಯನೂರು ಅವರಿಗೆ ತಿರುಗೇಟು ನೀಡಿದರು. ಈ ವೇಳೆ ಮಂಜುನಾಥ್ ರವರು ಏನ್ ಹೆದರಿಸುತ್ತಿರಾ..? ನಾನು ನಿಮ್ ಕಾರ್ಪೊರೇಟ್ ಅಲ್ಲ ಹೆದರುವುದಕ್ಕೆ ಎಂದು ಜೋರಾಗಿಯೇ ಕಿರುಚಾಡಿದರು.
ಇಬ್ಬರು ಮಾತಿಗೆ ಮಾತು ಕೊಡುತ್ತಾ ಹೋಗುತ್ತಿದ್ದಂತೆಯೇ ಸಚಿವ ಡಿ ಸಿ ತಮ್ಮಣ್ಣ ಅವರು ಮಧ್ಯೆ ಪ್ರವೇಶ ಮಾಡಿದರು. ಆಯನೂರು ಹಾಗೂ ಚಾರುಲತಾರನ್ನು ಸಮಾಧಾನ ಮಾಡಿದರು. ಈ ವೇಳೆ ಶಾಸಕ ಕೆ ಎಸ್ ಈಶ್ವರಪ್ಪ, ಎಂಎಲ್ಸಿ ಪ್ರಸನ್ನಕುಮಾರ್ ಸೇರಿ ಮೇಯರ್ ಹಾಗೂ ಪಾಲಿಕೆ ಸದಸ್ಯರುಗಳು ಮೂಕ ಪ್ರೇಕ್ಷಕರಾಗಿ ಇಬ್ಬರ ಜಟಾಪಟಿ ನೋಡುತ್ತಾ ನಿಂತಿದ್ದರು.