ಶಿವಮೊಗ್ಗ: ರಾಮಮಂದಿರ ನಿರ್ಮಾಣಕ್ಕೆ 70 ಲಕ್ಷ ಹಣವನ್ನು ಮಾಚೇನಹಳ್ಳಿಯ ಕೈಗಾರಿಕಾ ಕಾರ್ಮಿಕರು ನೀಡಿದ್ದಾರೆ. ನಾವು ಯಾರಿಗೂ ಒತ್ತಾಯ ಮಾಡುತ್ತಿಲ್ಲ. ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಮಾಡುತ್ತಿದ್ದು ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಭಾವನೆ ಇಲ್ಲದೇ ಜನ ಹಣ ನೀಡುತ್ತಿದ್ದಾರೆ. ಹಾಗಾಗಿ ಅನಗತ್ಯವಾಗಿ ಪ್ರತಿಪಕ್ಷದ ನಾಯಕರುಗಳು ಟೀಕೆ ಮಾಡುವ ಮೂಲಕ ಹಗುರುವಾಗಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪಕ್ಷದ ಜಿಲ್ಲಾ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣಾ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯನ್ನು ಗಟ್ಟಿಗೊಳಿಸುವ ಸಲುವಾಗಿ ಆಯೋಜಿಸಿದ್ದ ವಿಶೇಷ ಸಭೆ ವೇಳೆ ಮಾತನಾಡಿದರು.
ಸಭೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಎಸ್ ರುದ್ರೇಗೌಡ , ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್ ,ಸೇರಿದಂತೆ ಬಿಜೆಪಿ ಪಕ್ಷದ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.