ಶಿವಮೊಗ್ಗ: ತಾಲೂಕಿನ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಸರಿಡಲು ನಮ್ಮ ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸೋಗಾನೆಯ ವಿಮಾನ ನಿಲ್ದಾಣಕ್ಕೆ ಇಂದು ಸಂಜೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಶಿವಮೊಗ್ಗದ ವಿಮಾನ ನಿಲ್ದಾಣವು ಬೆಂಗಳೂರಿನ ನಂತರ ಉತ್ತಮ ಸೌಲಭ್ಯವನ್ನು ಹೊಂದಿರುವ ವಿಮಾನ ನಿಲ್ದಾಣವಾಗಲಿದೆ ಎಂದರು.
ಬೆಂಗಳೂರು ನಂತರ ಅತಿ ಉದ್ದದ ರನ್ ವೇ ಇದೆ. ಏರ್ ಬಸ್ ನಿಲುಗಡೆ ಮಾಡುವ ವ್ಯವಸ್ಥೆ ಇದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಟ್ಟದ ಏರ್ಪೋರ್ಟ್ ಆಗಲು ಬೇಕಾದ ಎಲ್ಲಾ ಸೌಲಭ್ಯಗಳೂ ಇಲ್ಲಿವೆ. ಇದನ್ನು ಮಾಡಿದ್ದು ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಎಂದು ತಮ್ಮ ರಾಜಕೀಯ ಗುರುಗಳನ್ನು ನೆನಪು ಮಾಡಿಕೊಂಡರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಯಡಿಯೂರಪ್ಪ ಅವರು ಸಾಕಷ್ಟು ವೈಯಕ್ತಿಕ ಆಸಕ್ತಿ ತೋರಿ ನಿರ್ಮಾಣ ಮಾಡಿಸಿದ್ದಾರೆ. ನಾನು ಬೆಂಗಳೂರಿನಲ್ಲಿದ್ದಾಗ ನನಗೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಭೇಟಿ ಮಾಡಬೇಕು ಎಂದು ತಿಳಿಸಿದ್ರು. ಈಗಲೂ ಸಹ ಪೋನ್ ಮಾಡಿ ಕಾಮಗಾರಿ ಹೇಗಿದೆ, ಉಳಿದ ಕಾಮಗಾರಿಗೆ ಅನುಮೋದನೆ ನೀಡಬೇಕು ಎಂದು ತಿಳಿಸಿದ್ದಾರೆ.
ಈ ವಿಮಾನ ನಿಲ್ದಾಣವು ಮುಂಬರುವ ಕರ್ನಾಟಕದ ಸಮಗ್ರ ಅಭಿವೃದ್ದಿಗೆ, ಶಿವಮೊಗ್ಗದ ಅಭಿವೃದ್ದಿಗೆ ಕೈಗಾರಿಕಾ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸುತ್ತದೆ ಎಂದರು. ನಮ್ಮ ಕರ್ನಾಟಕದ ಹೆಮ್ಮೆಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಲಿದೆ. ಇದಕ್ಕೆ ರೈತರು ಸಹ ಸಹಕಾರ ನೀಡಿದ್ದಾರೆ. ರೈತರು ನಿಲ್ದಾಣಕ್ಕೆ ಬೇಕಾದ ಭೂಮಿಯನ್ನು ನೀಡಿದ ರೈತರಿಗೆ ಧನ್ಯವಾದಗಳು, ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಬೇಕು, ಕಾಂಪೌಂಡ್ ಸುತ್ತ ರಸ್ತೆ ನಿರ್ಮಾಣ, ವಿಮಾನಗಳು ರಾತ್ರಿ ವೇಳೆ ಇಳಿಯಲು ಸೌಲಭ್ಯ ಒದಗಿಸಬೇಕಿದೆ. ಈ ಎಲ್ಲಾ ಕಾಮಗಾರಿಗಳಿಗೆ ಬೇಕಾದ 50 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಹೇಳಿದರು.
ರೈತರಿಗೆ ಅನುಕೂಲವಾಗಲು ಕಾಂಪೌಂಡ್ ಹೊರಗೆ ರಸ್ತೆ ನಿರ್ಮಾಣ ಮಾಡಲಾಗುವುದು. ಶಿವಮೊಗ್ಗದಿಂದ ವಿಮಾನ ನಿಲ್ದಾಣಕ್ಕೆ ಬರಲು ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು ಎಂದರು. ಈ ವೇಳೆ ಸಚಿವರಾದ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಹರತಾಳು ಹಾಲಪ್ಪ, ಅಶೋಕ್ ನಾಯ್ಕ್, ಮೇಯರ್ ಸುನೀತಾ ಅಣ್ಣಪ್ಪ ಸೇರಿ ಇತರರಿದ್ದರು. ಇದಕ್ಕೂ ಮುನ್ನಾ ಸಿಎಂ ಕಾಮಗಾರಿ ನಡೆಯುವ ಇಂಜಿನಿಯರ್ಗಳ ಬಳಿ ತೆರಳಿ ಅವರ ಜೊತೆ ಮಾತನಾಡಿ, ಅವರ ಟೋಪಿಯನ್ನು ಧರಿಸಿ ಫೋಟೊಗೆ ಪೋಸ್ ನೀಡಿದರು.
ಇದನ್ನೂ ಓದಿ: ನಿಮ್ಮ ಬದುಕು ಸರಿಯಾಗಬೇಕಿದ್ದರೆ ಸ್ವತಂತ್ರವಾಗಿ ನಮಗೆ ಅಧಿಕಾರ ಕೊಡಿ: ಹೆಚ್ಡಿಕೆ