ಶಿವಮೊಗ್ಗ: "ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಕಾರ್ಖಾನೆ ಉಳಿಸಿ ಅಭಿವೃದಧಿ ಪಡಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವ ವಿಶ್ವಾಸವಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ವಿಐಎಸ್‌ಎಲ್ ಕಾರ್ಮಿಕರ ಮುಷ್ಕರ ಗಮನದಲ್ಲಿದೆ. ಕಾರ್ಮಿಕರನ್ನು ನಿಯೋಗದೊಂದಿಗೆ ಭೇಟಿಯಾಗುತ್ತೇನೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಇನ್ನಿತರರ ಜೊತೆಯಲ್ಲಿ ಸಭೆ ನಡೆಸಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ" ಎಂದರು.
"ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವಿಐಎಸ್‌ಎಲ್ ಕಾರ್ಮಿಕರ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಕಾರ್ಖಾನೆಯನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಫ್ಯಾಕ್ಟರಿ ಮತ್ತೆ ಆರಂಭವಾಗಬೇಕು. ಮತ್ತೆ ಲಾಭದಲ್ಲಿ ನಡೆಯಬೇಕು ಎಂಬುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ಕೆಲಸ ಮಾಡೋಣ" ಎಂದು ತಿಳಿಸಿದರು.
ಬ್ರಾಹ್ಮಣ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ನಾನು ಜಾತಿ ಆಧಾರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಜನ ಜಾತಿ, ವೈಯಕ್ತಿಕತೆ ಮೇಲೆ ಕಿಮ್ಮತ್ತು ಕೊಡುವುದಿಲ್ಲ. ಇಂತಹ ಮಾತುಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಜನ ನಮ್ಮ ಪರ್ಫಾಮೆನ್ಸ್ ಮೇಲೆ, ಅಧಿಕಾರದ ಆಧಾರದ ಮೇಲೆ ಮತ ಹಾಕುತ್ತಾರೆ. ಮತದಾರರು ಈಗ ಪ್ರಬುದ್ಧರಾಗಿದ್ದಾರೆ" ಎಂದರು. ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಕುರಿತು ಪ್ರತಿಕ್ರಿಯಿಸಿ, "ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ದೊರೆಯಲಿದೆ" ಎಂದು ಹೇಳಿದರು.
ಟರ್ಕಿ ಭೂಕಂಪ ವಿಚಾರ: ಕರ್ನಾಟಕದವರು ಯಾರಾದರೂ ಇದ್ದಾರಾ ಎನ್ನುವ ಕುರಿತು ಈಗಾಗಲೇ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದರು.
ಸಿಎಂಗೆ ಪ್ರತಿಭಟನೆ ಬಿಸಿ: ನಗರದ ಎನ್ಇಎಸ್ ಮೈದಾನದಲ್ಲಿ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಹೆಲಿಪ್ಯಾಡ್ ಬಳಿ ಇರುವ ಸರ್ಕ್ಯೂಟ್ ಹೌಸ್ ಪ್ರವಾಸಿ ಮಂದಿರದ ಬಳಿ ಮಲೆನಾಡು ಹೋರಾಟ ಸಮಿತಿ ಹಾಗೂ ನವಕರ್ನಾಟಕ ಸಂಘಟನೆಯ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದರು. ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ನವಕರ್ನಾಟಕ ಸಂಘಟನೆಯ ಕಾರ್ಯಕರ್ತರು ಹುಣಸೋಡು ಸ್ಫೋಟ ಪ್ರಕರಣದ ತನಿಖೆ ನಡೆಸಬೇಕು ಹಾಗೂ ಸ್ಫೋಟದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸಮಿತಿಯ ರೈತರು ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡಬೇಕು ಹಾಗೂ ಬಗರ್ ಹುಕಂ ರೈತರಿಗೆ ಹಕ್ಕು ಪತ್ರವನ್ನು ಕೂಡಲೇ ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಒಡಕು ಮೂಡಿಸುವ ಜೆಡಿಎಸ್, ಕಾಂಗ್ರೆಸ್ ತಂತ್ರ ಫಲಿಸಲ್ಲ: ಬಿ.ವೈ.ವಿಜಯೇಂದ್ರ