ಶಿವಮೊಗ್ಗ: ಗರೀಬಿ ಹಠಾವೋ ಎನ್ನುವ ಕಾಲ ಈಗ ಹೋಗಿದೆ. 2023 ರಲ್ಲಿ ಜನರಿಗೋಸ್ಕರ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕರ್ತರಿಗೆ ಕರೆ ನೀಡಿದರು. ಶಿವಮೊಗ್ಗ ನಗರದ ಪ್ರೇರಣಾ ಸಭಾಂಗಣದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಹಾಗೂ ಡಿಕೆಶಿ ಮುಖ ಒಂದೊಂದು ದಿಕ್ಕಿಗಿದೆ. ಹಿಜಾಬ್ ಸಮಸ್ಯೆಯನ್ನು ಪಿಎಫ್ಐ ಹುಟ್ಟುಹಾಕಿತು. ಇದನ್ನು ತಪ್ಪು ಎನ್ನುವ ತಾಕತ್ತು ಕಾಂಗ್ರೆಸ್ಸಿಗರಿಗಿಲ್ಲ. ದೇಶವಿಭಜನೆ ಮಾಡುವವರಿಗೆ ಪುಷ್ಟಿ ನೀಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ಆದೇಶ ಮಾಡಿದ್ದರೂ ಹೈಕೋರ್ಟ್ ಆದೇಶ ಪಾಲನೆ ಮಾಡಿ ಎಂಬ ಒಂದೇ ಮಾತು ಕಾಂಗ್ರೆಸ್ಸಿಗರ ಬಾಯಲ್ಲಿ ಬರಲಿಲ್ಲ. ಡಿ ಜೆ ಹಳ್ಳಿ, ಕೆ ಜಿ ಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಇಟ್ಟಾಗ ಬೆಂಕಿ ಇಟ್ಟವರ ಪರವಾಗಿ ಮಾತನಾಡಿದರು. ನಿಮ್ಮ ಶಾಸಕನ ಬಗ್ಗೆ ಮಾತನಾಡದವರಿಗೆ ಯಾವ ತಾಕತ್ತಿದೆ. ಹಿಂದು ಕಾರ್ಯಕರ್ತರ ಕೊಲೆ ಮಾಡಿದವರ ಕೇಸ್ ಕಾಂಗ್ರೆಸ್ ನವರು ವಾಪಸ್ ಪಡೆದವರು. ಹುಬ್ಬಳ್ಳಿ ಘಟನೆ ತಪ್ಪು ಎನ್ನುವ ಕೆಲಸ ಕಾಂಗ್ರೆಸ್ ಮಾಡಲಿಲ್ಲ ಎಂದು ಟೀಕಿಸಿದರು.
ಶಿವಮೊಗ್ಗದಲ್ಲಿ ಟೂರಿಸಂಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಬಗರ್ ಹುಕುಂ ಸಮಸ್ಯೆಗೆ ಮುಕ್ತಿ ಹಾಡುವ ಕೆಲಸ ನಾವು ಮಾಡುತ್ತೇವೆ. ಈ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದೇವೆ. ಶರಾವತಿ, ಚಕ್ರ ಸಂತ್ರಸ್ಥರ ಸಮಸ್ಯೆಗಳಿಗೆ ಶೀಘ್ರವೇ ಮುಕ್ತಿಕೊಡುವ ಕೆಲಸ ಮಾಡುತ್ತೇವೆ. ಜನಸ್ಪಂದನೆಯ ಸರ್ಕಾರ ನಮ್ಮ ಸರ್ಕಾರ ಆಗಬೇಕು. ಅದಕ್ಕಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಏಳು ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಲೆವೆಲ್ಗೆ ಮಾಡುತಿದ್ದೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಮಠಗಳಿಂದ ಕಮಿಷನ್ ಪಡೆದ ಆರೋಪ: ದಿಂಗಾಲೇಶ್ವರ ಶ್ರೀಗೆ ತಿರುಗೇಟು ನೀಡಿದ ಪಲಿಮಾರು ಶ್ರೀ