ಶಿವಮೊಗ್ಗ: ಕೊರಳಪಟ್ಟಿ ಹಿಡಿದುಕೊಂಡು ಎಲ್ಲಾ ಪಕ್ಷದ ನಾಯಕರು ಕಿತ್ತಾಡುವ ಪರಿಸ್ಥಿತಿಗೆ ಬಂದಿರುವ ಇವರಿಗೆ ಯಾವ ರೀತಿಯಲ್ಲಿ ಖಂಡಿಸಿದರೂ ಸಾಲದು. ಹಾಗಾಗಿ ಎಲೆ, ಅಡಿಕೆ ಹಾಕಿಕೊಂಡು ಛೀ,ಥೂ.. ಎಂದು ಉಗುಳುವ ಚಳವಳಿಯನ್ನು ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಜಿಲ್ಲೆಯ ಶಿವಪ್ಪನಾಯಕ ಪ್ರತಿಮೆ ಎದುರು ಹಾಗೂ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನ ಇರುವ ಪ್ರದೇಶಗಳಲ್ಲಿ ಎಲ್ಲಾ ಪಕ್ಷದ ನಾಯಕರುಗಳ ಪ್ರತಿಕೃತಿಗೆ ಛೀ,ಥೂ.. ಎಂದು ಉಗುಳುವ ಮೂಲಕ ಶಾಸಕರುಗಳ ಪ್ರತಿಕೃತಿ ದಹನ ಮಾಡಲಾಗುತ್ತದೆ. ಇವರಿಗೆ ಕೇವಲ ಉಗಿದರೆ ಸಾಲದು. ಇವರ ಪ್ರತಿಕೃತಿ ದಹನ ಮಾಡಬೇಕು ಎಂದು ನಿರ್ಧರಿಸಿದ್ದೇವೆ ಎಂದರು.
ಈ ಮೂರೂ ಪಕ್ಷಗಳು ಕರ್ನಾಟಕದಲ್ಲಿ ನಿರ್ಮಾಮವಾಗಬೇಕು. ಯೋಗ್ಯ ಅಭ್ಯರ್ಥಿಗಳು ಆಯ್ಕೆಯಾಗಬೇಕು. ಜನರಿಗೂ ಸಹ ತಿಳುವಳಿಕೆ ಬರಬೇಕು ಎನ್ನುವ ಸಲುವಾಗಿ ಈ ಚಳವಳಿ ಹಮ್ಮಿಕೊಂಡಿದ್ದೇವೆ. ಮೊನ್ನೆ ಬೆಂಗಳೂರಿನ ಫ್ರೀಡಂ ಪಾಕ್ರ್ನಲ್ಲಿ ಈ ಚಳವಳಿ ಹಮ್ಮಿಕೊಂಡಾಗ ಮಾಧ್ಯಮಗಳು ಇಂತಹ ಸುದ್ದಿಯನ್ನು ಬಿತ್ತರಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇವಲ ಇವರ ರೆಸಾರ್ಟ್ ರಾಜಕಾರಣ ತೋರಿಸುವ ಚಾನೆಲ್ಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಪ್ರಮುಖ ಅಂಗ ಮಾಧ್ಯಮ ಎನ್ನುವುದನ್ನ ಮರೆಯಬಾರದು. ಹಾಗಾಗಿ ಮಾಧ್ಯಮಗಳು ಇಂತಹ ಚಳವಳಿಗಳನ್ನು ಸಹ ತೋರಿಸುವ ಮೂಲಕ ಅವರಿಗೆ ಅರಿವು ಉಂಟು ಮಾಡಬೇಕು ಎಂದರು.