ಶಿವಮೊಗ್ಗ: ಬರೋಬ್ಬರಿ 30 ವರ್ಷಗಳಿಂದ ಗಾಂಧೀಜಿ ಕನಸಿನಂತೆ ನಡೆಸಿಕೊಂಡು ಬರಲಾಗುತ್ತಿದ್ದ ಸಂಸ್ಥೆಯೊಂದು, ಮುಚ್ಚುವ ಸನೀಹಕ್ಕೆ ಬಂದು ನಿಂತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ, ಭೀಮನಕೋಣೆ - ಹೊನ್ನೆಸರದಲ್ಲಿರುವ ಚರಕ ಸಂಸ್ಥೆಯೂ, ಪವಿತ್ರ ವಸ್ತ್ರ ಅಭಿಯಾನದಲ್ಲಿ ಅಸಾಧಾರಣ ಸಾಧನೆ ಮಾಡಿತ್ತು.
ಸರ್ಕಾರ ಇದನ್ನು ಗುರುತಿಸಿ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮತ್ತು ಕೈಮಗ್ಗ ಕ್ಷೇತ್ರ ವಿಸ್ತಾರಗೊಳ್ಳಲಿ ಎಂಬ ಉದ್ದೇಶದಿಂದ ಸುಮಾರು 33 ಲಕ್ಷ ರೂ. ಹಣವನ್ನು ನೀಡುವುದಾಗಿ ಘೋಷಿಸಿತ್ತು. ಆದರೆ, ಸರ್ಕಾರದ ಈ ಆಶಯ ಮಾತ್ರ ಕಳೆದ 8 ವರ್ಷಗಳಿಂದ ಹಾಗೆಯೇ ಉಳಿದಿದೆ. ಕಳೆದ 3 ವರ್ಷಗಳ ಹಿಂದೆ ಸರ್ಕಾರದ ಆದೇಶವೇನೋ ಹೊರಬಿದ್ದು, ಹಣ ಕೂಡ ಬ್ಯಾಂಕಿಗೆ ಸಂದಾಯವೂ ಆಗಿತ್ತು. ಆದರೆ, ಇದುವರೆಗೂ ಈ ಹಣ ಮಾತ್ರ ಚರಕ ಸಂಸ್ಥೆಗೆ ತಲುಪಲೇ ಇಲ್ಲ ಎಂದು ಆರೋಪಿಸಲಾಗಿದೆ.
ಈಗಾಗಲೇ, ಕೊರೊನಾ ಹಿನ್ನೆಲೆಯಲ್ಲಿ ಕೈಮಗ್ಗದ ಉತ್ಪನ್ನಗಳು ಮಾರುಕಟ್ಟೆ ಕಳೆದುಕೊಂಡಿರುವ ಹಿನ್ನೆಲೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಶಿವಮೊಗ್ಗದ ಸಾಗರದ ಹೆಗ್ಗೋಡಿನ ಚರಕ ಸಂಸ್ಥೆ ಭವಿಷ್ಯ ಅಂಧಕಾರದಲ್ಲಿದೆ. ಇಲ್ಲಿನ ಭೀಮನಕೋಣೆ - ಹೊನ್ನೇಸರದಲ್ಲಿರುವ ಚರಕ ಮಹಿಳಾ ವಿವಿದ್ದೋದ್ಧೇಶ ಸಂಘದ, ನೇಕಾರರಿಗೆ ಸಮಸ್ಯೆಯುಂಟಾಗಿದೆ.
ಸರ್ಕಾರದ ಯೋಜನೆಯ ಹಣವಾದರೂ ಸಂಸ್ಥೆಗೆ ತಲುಪಿದರೆ ಸ್ವಲ್ಪ ಅನುಕೂಲವಾದೀತು ಎಂದುಕೊಂಡವರಿಗೆ ಜವಳಿ ಇಲಾಖೆಯ ಅಧಿಕಾರಿಗಳು ಹಣ ಬಿಡುಗಡೆಗೆ ಹಿಂದುಮುಂದು ನೋಡುತ್ತಿದ್ದಾರೆ. ಸುಮಾರು 450 ಮಹಿಳೆಯರಿಗೆ ಕೆಲಸ ನೀಡಿ ಕೈಮಗ್ಗ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡಿರುವ ಚರಕ ಸಂಸ್ಥೆ ಸಿಬ್ಬಂದಿ ವಿಳಂಬ ನೀತಿಗೆ ಬೇಸತ್ತು ಹೋಗಿದ್ದಾರೆ. ಅಧಿಕಾರಿಗಳು ಕೇಳಿದ ದಾಖಲೆಗಳೆಲ್ಲವನ್ನು ನೀಡಿದರು ಕೂಡ, ಕಚೇರಿಗೆ ಅಲೆದಾಡಿಸಿದ್ದು ಬಿಟ್ಟರೆ ಹಣವನ್ನು ಸಂಸ್ಥೆಗೆ ಬಿಡುಗಡೆ ಮಾಡಲೇ ಇಲ್ಲ.
ಓದಿ: ತುಮಕೂರಿನಲ್ಲಿ ಮಹಳೆ ಮೇಲೆ ಅತ್ಯಾಚಾರ, ಕೊಲೆ.. ಈ ಕಡೆಗೂ ಸ್ವಲ್ಪ ಗಮನ ಕೊಡಿ ಅಂದರು ಶಾಸಕ ಗೌರಿ ಶಂಕರ್