ಶಿವಮೊಗ್ಗ: ರಾಜ್ಯದ ಎಲ್ಲ ವಿಶ್ವ ವಿದ್ಯಾನಿಲಯಗಳಿಗೆ ಅದಷ್ಟು ಬೇಗ ಕುಲಪತಿ, ರಿಜಿಸ್ಟ್ರಾರ್ಗಳನ್ನು ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮದ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಅವರು, ಈಗಾಗಲೇ ವಿಸಿ ಸರ್ಚ್ ಕಮಿಟಿಯವರು ವರದಿಯನ್ನು ಮುಖ್ಯಮಂತ್ರಿಗೆ ನೀಡಿದ್ದಾರೆ. ಆ ವರದಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಅವರು ಒಪ್ಪಿಗೆ ಕೊಟ್ಟ ನಂತರ ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ವಿಸಿ ಹಾಗೂ ರಿಜಿಸ್ಟ್ರಾರ್ಗಳನ್ನು ನೇಮಕ ಮಾಡಲಾಗುವುದು ಎಂದರು.
ಐಎಎಸ್, ಕೆಎಎಸ್ ಅಧಿಕಾರಿಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ: ವಿಶ್ವ ವಿದ್ಯಾಲಯಗಳಲ್ಲಿ ಈ ಹಿಂದೆ ಕೆಎಎಸ್, ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡುತ್ತಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರೊಫೆಸರ್ಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಿದರು. ಈಗ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡುತ್ತೇವೆ ಎಂದರು.
ಕುವೆಂಪು ವಿವಿಯಲ್ಲಿ ಸ್ಮಾರ್ಟ್ ಕ್ಲಾಸ್ ಹಗರಣ ವಿಚಾರ: ಸ್ಮಾರ್ಟ್ ಕ್ಲಾಸ್ ಅವ್ಯವಹಾರ ವಿವಿಯ ಆಂತರಿಕ ವಿಚಾರವಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಸಚಿವರು ತಿಳಿಸಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆ ವಿಚಾರ: ಅತಿಥಿ ಉಪನ್ಯಾಸಕರ ಸಮಸ್ಯೆ 20 ವರ್ಷದಿಂದ ಇರುವ ಸಮಸ್ಯೆಯಾಗಿದೆ. ಎಲ್ಲರೂ ಖಾಯಂಮಾತಿ ಮಾಡಿ ಅಂತಾರೆ, ಉಮಾದೇವಿ ಪ್ರಕರಣ ನಂತರ ಖಾಯಂ ಮಾಡಲು ಬರಲ್ಲ. ಬಹಳ ಜವಾಬ್ದಾರಿಯುತವಾಗಿ ಹಿಂದಿನ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.
ವೇತನವನ್ನು ಹೆಚ್ಚಳ ಮಾಡಿದ್ದೇವೆ. ಕಾನೂನು ತೊಡಕುಗಳು ಬಹಳ ಇವೆ. ಯಾವುದಾದರೂ ರಾಜ್ಯದಲ್ಲಿ ಈ ರೀತಿ ಮಾಡಿದ್ದರೆ ಮಾಹಿತಿ ಕೊಡಿ ಅಂದಿದ್ದೇನೆ. ಅತಿಥಿ ಉಪನ್ಯಾಸಕರಿಗೆ ನಮ್ಮ ಸರ್ಕಾರ ಬಂದ ನಂತರ ಸೌಲಭ್ಯ ಹೆಚ್ಚು ಮಾಡಿದ್ದೇವೆ ಎಂದರು.
ಕೋವಿಡ್ ಬಗ್ಗೆ ಎಚ್ಚರಿಕೆ ಇರಲಿ ಆತಂಕ ಬೇಡ : ಶರಣ ಪ್ರಕಾಶ್ ಪಾಟೀಲ್- ಕೋವಿಡ್ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಆಂತಕಕ್ಕೆ ಒಳಗಾಗುವುದು ಬೇಡ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾವು ನಿನ್ನೆ ಕೋವಿಡ್ ಸಭೆ ಸಹ ಮಾಡಿದ್ದೇವೆ. ದಿನೇ ದಿನೇ ಕೇಸ್ ಜಾಸ್ತಿ ಆಗುತ್ತಿವೆ. ಎಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಜನರು ಮುಂಜಾಗ್ರತೆ ಕ್ರಮ ಅನುಸರಿಸಬೇಕು. ಆದರೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯಕ್ಕೆ 30 ಸಾವಿರ ವ್ಯಾಕ್ಸಿನ್ ಬಂದಿವೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ಪಾಸಿಟಿವ್ ರೇಟ್ ಜಾಸ್ತಿ ಇದೆ. ನಮ್ಮಲ್ಲಿ ಟೆಸ್ಟಿಂಗ್ ಜಾಸ್ತಿ ಮಾಡ್ತಿರುವ ಕಾರಣ ಪಾಸಿಟಿವ್ ಜಾಸ್ತಿ ಇದೆ. 60 ವರ್ಷ ಮೇಲ್ಪಟ್ಟವರು, ಅನಾರೋಗ್ಯ ತೊಂದರೆ ಇರುವವರು ಮಾಸ್ಕ್ ಧರಿಸಬೇಕು. ಬೂಸ್ಟರ್ ಡೋಸ್ ಪಡೆಯದೇ ಇರುವವರು ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವೇಕಾನಂದರ ಜಯಂತಿ ದಿನ ಗ್ಯಾರಂಟಿ ಯುವನಿಧಿ ಜಾರಿ: ಜನವರಿ 12 ರಂದು ವಿವೇಕಾನಂದ ಜಯಂತಿ ಇದೆ. ಅಂದು ನಮ್ಮ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಜಾರಿ ಮಾಡಲಿದ್ದೇವೆ. ಈ ಕಾರ್ಯಕ್ರಮ ಶಿವಮೊಗ್ಗದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ 25 ಸಾವಿರ ನೋಂದಣಿ ಮಾಡಿಸಿದ್ದಾರೆ. ಈ ನೋಂದಣಿಗೆ ಯಾವುದೇ ಡೆಡ್ ಲೈನ್ ಇಲ್ಲ ಎಂದು ಸ್ಪಷ್ಟಪಡಿಸಿದರು. ಗ್ಯಾರೆಂಟಿಗಳನ್ನು ಕರ್ನಾಟಕದ ಪ್ರತಿ ಮೂಲೆಗೆ ತಲುಪಿಸಬೇಕು. ಆ ಉದ್ದೇಶದಿಂದ ಗ್ಯಾರೆಂಟಿ ಯೋಜನೆ ಜಾರಿ ಕಾರ್ಯಕ್ರಮಗಳನ್ನು ವಿಭಾಗವಾರು ಮಾಡಿದ್ದೇವೆ ಎಂದರು.
ಬಿಜೆಪಿ ಪ್ರತಿಭಟನೆ ವಿಚಾರ: ಬಿಜೆಪಿಯವರನ್ನು ಜನರು ವಿಪಕ್ಷದಲ್ಲಿ ಕೂರಿಸಿದ್ದಾರೆ. ವಿಪಕ್ಷದಲ್ಲಿ ಕುಳಿತು ಕೆಲಸ ಮಾಡಬೇಕು. ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಆಸಕ್ತಿ ಇಲ್ಲ. ಅಭಿವೃದ್ಧಿ ಬಿಟ್ಟು ಎಲ್ಲಾ ವಿಚಾರಗಳಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಸಿಎಂಗೆ ಆಹ್ವಾನ ಇಲ್ಲದ ವಿಚಾರ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಇದನ್ನೂಓದಿ:ಅಪರಾಧಿಗಳಿಗೆ ಜಾತಿ ಧರ್ಮದ ಬಣ್ಣ ಹಚ್ಚುವುದು ಅಪಾಯಕಾರಿ: ಬಿಜೆಪಿ ವಿರುದ್ಧ ಸಿಎಂ ಕಿಡಿ