ಚಿಕ್ಕಮಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಹಾಗೂ ಸ್ಥಳ ಮಹಜರಿಗಾಗಿ ಚಿಕ್ಕಮಗಳೂರಿಗೆ ಸಿಸಿಬಿ ಪೊಲೀಸರು ಆಗಮಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಯಾದ ಗಗನ್ ಕಡೂರು ಹಾಗೂ ವಂಚನೆಗೊಳಗಾದ ಉದ್ಯಮಿ ಗೋವಿಂದ ಪೂಜಾರಿ ಸಮ್ಮುಖದಲ್ಲಿ ಚಿಕ್ಕಮಗಳೂರು ಹಾಗೂ ಕಡೂರಿನಲ್ಲಿ ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದರು.
ಚೈತ್ರಾ ಕುಂದಾಪುರ ಪ್ರಕರಣ ಬಗೆದಷ್ಟು ಅಂಶಗಳು ಬಯಲಾಗುತ್ತಿವೆ. ಈ ಘಟನೆ ನಡೆಯುವುದಕ್ಕೂ ಮೊದಲು ಆರೋಪಿಗಳು ಭೇಟಿ ನೀಡಿದ್ದ ಸ್ಥಳಕ್ಕೆ ಸಿಸಿಬಿ ಪೊಲೀಸರು ಆಗಮಿಸಿ ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ. ಬೆಂಗಳೂರಿನಿಂದ ನೇರವಾಗಿ ಸಿಸಿಬಿ ಪೊಲೀಸರು ಚಿಕ್ಕಮಗಳೂರು ಐಬಿಗೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ಎರಡನೇ ಮೀಟಿಂಗ್ ಚಿಕ್ಕಮಗಳೂರು ಐಬಿಯ ರೂಮ್ 5ರಲ್ಲಿ ನಡೆದಿತ್ತು. ಇದೇ ಕೊಠಡಿಯಲ್ಲಿ ನಕಲಿ ವಿಶ್ವನಾಥ್ ಜಿ ಅವರನ್ನು ಚೈತ್ರಾ ಆ್ಯಂಡ್ ಗ್ಯಾಂಗ್ ಗೋವಿಂದ ಪೂಜಾರಿಗೆ ಪರಿಚಯ ಮಾಡಿಕೊಟ್ಟಿತ್ತು.
ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಒಂದು ಗಂಟೆಗೂ ಅಧಿಕ ಕಾಲ ವಿಚಾರಣೆ ಹಾಗೂ ಸ್ಥಳ ಮಹಜರು ಕಾರ್ಯ ನಡೆಸಿದ್ದಾರೆ. ಪ್ರವಾಸಿ ಮಂದಿರದಲ್ಲಿ ಸಿಸಿಬಿ ಪೊಲೀಸರು ಗೋವಿಂದ ಪೂಜಾರಿ ಹಾಗೂ ಗಗನ್ ಸಮ್ಮುಖದಲ್ಲಿ ಆ ದಿನ ನಡೆದ ಘಟನೆ ಹಾಗೂ ಮಾತುಕತೆ ಎಲ್ಲದರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಪ್ರವಾಸಿ ಮಂದಿರದ ಇಬ್ಬರು ಸಿಬ್ಬಂದಿಗಳನ್ನೂ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಅವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಆ ದಿನ ರೂಂ ಪಡೆಯಲು ಯಾರೋ ಫೋನ್ ಮಾಡಿದ್ದರು. ಫ್ರೆಶ್ ಅಪ್ಗೆ ಬಂದಿರಬಹುದು ಎಂದು ಕೊಠಡಿ ನೀಡಿದ್ದೆವು ಎಂದು ಪ್ರವಾಸಿ ಮಂದಿರದ ಸಿಬ್ಬಂದಿಗಳು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ವಿಚಾರಣೆ ಹಾಗೂ ಸ್ಥಳ ಮಹಜರು ಕಾರ್ಯ ಮುಗಿಯುತ್ತಿದ್ದಂತೆ ಸಿಸಿಬಿ ಪೊಲೀಸರು ಗಗನ್ ಕಡೂರುನನ್ನು ಕಡೂರಿನ ಮನೆಗೆ ವಿಚಾರಣೆ ಹಾಗೂ ಸ್ಥಳ ಮಹಜರು ಮಾಡಲು ಕರೆತಂದರು. ತರೀಕೆರೆಯ ರಮೇಶ್ಗೆ ವಿಶ್ವನಾಥ್ ಜೀ ಆಗಲು ಟ್ರೈನಿಂಗ್ ನೀಡಿದ್ದೇ ಗಗನ್ ಮನೆಯಲ್ಲಿ. ಹಾಗಾಗಿ ಈತನ ಮನೆಯಲ್ಲಿ ವಿಚಾರಣೆ ಹಾಗೂ ಸ್ಪಾಟ್ ಮಹಜರ್ ನಡೆಸಿದರು. ನಂತರ ಕೆ ಎಂ ರಸ್ತೆಯಲ್ಲಿರುವ ಗಗನ್ ಕಡೂರಿನ ಹೆಚ್ಡಿಎಫ್ಸಿ ಬ್ಯಾಂಕಿನ ಅಕೌಂಟ್ ಪರಿಶೀಲನೆಯನ್ನು ನಡೆಸಿದರು. ಅಕೌಂಟ್ನಲ್ಲಿ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿ, ನಂತರ ಎಪಿಎಂಸಿ, ಪ್ರವಾಸಿ ಮಂದಿರ, ಸ್ಥಳಗಳಲ್ಲಿ ಮಹಜರು ಕಾರ್ಯ ನಡೆಸುವುದರ ಮೂಲಕ ಮಹತ್ವದ ಕೆಲ ಅಂಶಗಳನ್ನು ಕಲೆ ಹಾಕಿದ್ದಾರೆ.
ಶಿವಮೊಗ್ಗದಲ್ಲೂ ಸ್ಥಳ ಮಹಜರು: ಚಿಕ್ಕಮಗಳೂರಿನಲ್ಲಿ ಸ್ಥಳ ಮಹಜರಿನ ನಂತರ ಆರೋಪಿ ಗಗನ್ ಕಡೂರು ಅವರನ್ನು ಶಿವಮೊಗ್ಗಕ್ಕೆ ಕರೆತಂದ ಸಿಸಿಬಿ ಪೊಲೀಸರು, ಶಿವಮೊಗ್ಗದ ಗೌಡ ಸಾರಸ್ವತ ಕಲ್ಯಾಣ ಮಂದಿರದ ಮಥುರ ಪ್ಯಾರಡೈಸ್ ರಸ್ತೆಯ ಬಳಿ ಸ್ಥಳ ಮಹಜರು ಮಾಡಿದರು. ಇದೇ ಸ್ಥಳದಲ್ಲಿ ಉದ್ಯಮಿಯಿಂದ 50 ಲಕ್ಷ ರೂ. ಗಳನ್ನು ಗಗನ್ ಕಡೂರು ಪಡೆದು ಚೈತ್ರ ಕುಂದಾಪುರಗೆ ನೀಡಿದ್ದ. ಸಿಸಿಬಿ ಇನ್ಸ್ಪೆಕ್ಟರ್ ಭರತ್ ಹಾಗೂ ಇಬ್ಬರು ಪೊಲೀಸರ ತಂಡ ಆಗಮಿಸಿ ಸ್ಥಳ ಮಹಜರು ನಡೆಸಿದರು.
ಇದನ್ನೂ ಓದಿ: ಉದ್ಯಮಿಗೆ ವಂಚನೆ ಪ್ರಕರಣ ; ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನ