ಶಿವಮೊಗ್ಗ: ಬಾರ್ ಮುಚ್ಚುವ ಸಮಯವಾಯ್ತು ಎಂದಿದ್ದಕ್ಕೆ ಬಾರ್ ಕ್ಯಾಷಿಯರ್ನನ್ನೇ ಮೂವರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಆಯನೂರು ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಆಯನೂರು ಗ್ರಾಮದಲ್ಲಿ ನವರತ್ನ ಬಾರ್ನ ಕ್ಯಾಷಿಯರ್ ಸಚಿನ್ ಕುಮಾರ್ (27) ಮೃತ ವ್ಯಕ್ತಿ. ಸಚಿನ್ನ್ನು ಆಯನೂರು ಕೋಟೆ ತಾಂಡದ ನಿವಾಸಿಗಳಾದ ನಿರಂಜನ, ಸತೀಶ್ ಹಾಗೂ ಅಶೋಕ ನಾಯ್ಕ ಎಂಬುವರು ಸೇರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ನವರತ್ನ ಬಾರ್ ಅಸಿಸ್ಟೆಂಟ್ ಕ್ಯಾಶಿಯರ್ ಅರುಣ್ ಕುಮಾರ್ ಎಂಬುವರು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ: ಕ್ಯಾಷಿಯರ್ ಸಚಿನ್ ಅವರನ್ನು ಕೊಲೆ ಮಾಡಿದ ನಿರಂಜನ, ಸತೀಶ್ ಹಾಗೂ ಅಶೋಕ ನಾಯ್ಕ ಪ್ರತಿದಿನ ತಮ್ಮ ತಾಂಡದಿಂದ ಬಂದು ನವರತ್ನ ಬಾರ್ನಲ್ಲಿ ಮದ್ಯ ಕುಡಿಯುತ್ತಿದ್ದರು. ಕಳೆದ 8-10 ದಿನಗಳಿಂದ ಮೂವರು ಬಾರ್ಗೆ ಬಂದಿದ್ದ ಸಂದರ್ಭದಲ್ಲಿ ಸಚಿನ್ ಹಣ ಕೇಳಿದ್ದಕ್ಕೆ, ಜನರ ಮಂದೆ ಹಣ ಕೇಳುತ್ತಿಯಾ. ನಿನಗೆ ಒಂದು ದಿನ ಇದೆ ಎಂದು ಧಮ್ಕಿ ಹಾಕಿ ಹೋಗುತ್ತಿದ್ದರಂತೆ.
ಭಾನುವಾರ ರಾತ್ರಿ ಮೂವರು ಆರೋಪಿಗಳೂ ಬಾರ್ಗೆ ಬಂದು ಕುಡಿದಿದ್ದಾರೆ. ರಾತ್ರಿ 11:30ರ ಸಮಯಕ್ಕೆ ಬಾರ್ ಮುಚ್ಚಬೇಕಿದೆ. ಬೇಗ ಕುಡಿದು ಹೊರ ಹೋಗಿ ಎಂದಿದ್ದಕ್ಕೆ ಸತೀಶ್, ನಿರಂಜನ್ ಹಾಗೂ ಅಶೋಕ ನಾಯ್ಕ ಅವರು ಸಚಿನ್ ಕುಮಾರ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ಬಾರ್ ಸಿಬ್ಬಂದಿ 112 ನಂಬರ್ಗೆ ಕರೆ ಮಾಡಿದ್ದಾರೆ. ಈ ವೇಳೆ ಬಂದ ಪೊಲೀಸರು ಬಾರ್ನಲ್ಲಿ ನಡೆಯುತ್ತಿದ್ದ ಗಲಾಟೆ ಬಿಡಿಸಿ ಹೊರಬರುವಷ್ಟರಲ್ಲಿ ನಿರಂಜನ್ ಎಂಬಾತ ಸಚಿನ್ ಕುಮಾರ್ ಎದೆ ಹಾಗೂ ಪಕ್ಕೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಚಿನ್ನನ್ನು ಸಮೀಪದ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಕಡೆಗೆ ರವಾನಿಸಲಾಗಿತ್ತು. ಆದರೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆತಂದು ನೋಡಿದಾಗ ಸಚಿನ್ ಮೃತಪಟ್ಟಿದ್ದ. ಈ ಕುರಿತು ಬಾರ್ಸಿಬ್ಬಂದಿ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣದ ಮೂವರೂ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕುಂಸಿ ಪೊಲೀಸ್ ಠಾಣೆ ಪೊಲೀಸರು ಮಹಜರು ಮಾಡಿದ್ದಾರೆ. ಬಾರ್ ತಪಾಸಣೆ ನಡೆಸಿ, ಸಿಸಿ ಕ್ಯಾಮರಾ ಪರಿಶಿಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಾರ್ ಮಾಲೀಕರಾದ ಗಿರೀಶ್ ಕೋವಿ, ''ಬಾರ್ ಸಮಯ ಆಗಿದ್ದರಿಂದ ಹೊರಗೆ ಹೋಗಿ ಎಂದಿದ್ದಕ್ಕೆ ಮೂವರೂ ಗಲಾಟೆ ಮಾಡಿದ್ದಾರೆ. ನಂತರ ಚಾಕುನಿಂದ ಇರಿದು ಪರಾರಿಯಾಗಿದ್ದಾರೆ. ಇವರನ್ನು ಸೆರೆ ಹಿಡಿದು ಕಾನೂನಡಿ ಸರಿಯಾದ ಶಿಕ್ಷಿಸಬೇಕು'' ಎಂದು ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ ಎರಡು ಎಫ್ಐಆರ್: ''ಆಯನೂರು ಬಾರ್ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂದ ಎರಡು ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗುವುದು. ಬಾರ್ನಲ್ಲಿ ನಡೆದ ಘಟನೆಯಲ್ಲಿ ಸಚಿನ್ ಕುಮಾರ್ ಎಂಬಾತನ ಕೊಲೆ ನಡೆದಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಕೊಲೆ ನಡೆಸಿದವರ ಪೂರ್ವಪರದ ವಿಚಾರಣೆ ನಡೆಸಲಾಗುತ್ತಿದೆ'' ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಕೇವಲ ಒಂದು ಹಾಡಿಗೆ ನಡೆದ ಗಲಾಟೆ... ಕೊಲೆಯಲ್ಲಿ ಅಂತ್ಯ