ಶಿವಮೊಗ್ಗ: ನಿರಂತರ ಜ್ಯೋತಿ ವಿದ್ಯುತ್ ಲೈನ್ ನಿರ್ಮಾಣಕ್ಕಾಗಿ ಭದ್ರಾ ಅಭಯಾರಣ್ಯದಲ್ಲಿ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿರುವ ಘಟನೆ ನಡೆದಿದೆ. ಉಂಬ್ಳೆಬೈಲು ಬಳಿಯ ಭದ್ರಾ ಅಭಯಾರಣ್ಯದಲ್ಲಿ ಉಂಬ್ಳೆಬೈಲು ಹಾಗೂ ಕೈದೂಡ್ಲು ಗ್ರಾಮಗಳಿಗೆ ನಿರಂತರ ಜ್ಯೋತಿ ವಿದ್ಯುತ್ ವಿತರಣೆಗೆ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಲೈನ್ ಹಾಕಲು ಬಜಾಜ್ ಎಲೆಕ್ಟ್ರಿಕಲ್ ಕಂಪನಿ ಗುತ್ತಿಗೆ ತೆಗೆದುಕೊಂಡಿದೆ.
ಈ ಹಿಂದೆ ಇದೇ ಭಾಗದಲ್ಲಿ ಒಂದು ವಿದ್ಯುತ್ ಲೈನ್ ಹಾಕಲಾಗಿದೆ. ಅದೇ ಕಂಬಕ್ಕೆ ನಿರಂತರ ಜ್ಯೋತಿ ಲೈನ್ ಹಾಕಿದ್ರೆ ಯಾವುದೇ ಸಮಸ್ಯೆ ಬರುತ್ತಿರಲಿಲ್ಲ. ಆದರೆ, ಬಜಾಜ್ ಎಲೆಕ್ಟ್ರಿಕಲ್ ಕಂಪನಿ ನಿರಂತರ ವಿದ್ಯುತ್ ಲೈನ್‌ಗೆ ಹೊಸ ವಿದ್ಯುತ್ ಕಂಬವನ್ನು ಹಾಕಿದೆ. ಇದರಿಂದ ವಿದ್ಯುತ್ ಕಂಬದ ಬಳಿ ಬರುವ ಮರಗಳನ್ನು ಕಂಪನಿಯವರು ಕಡಿತಲೆ ಮಾಡುವಾಗ ಗ್ರಾಮಸ್ಥರು ಪ್ರಶ್ನಿಸಿದ್ದು, ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಒಂದು ಟ್ರಾಕ್ಟರ್, ಟ್ರಾಕ್ಟರ್‌ನಲ್ಲಿನ ಮರ ಹಾಗೂ ನಾಲ್ವರನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.
ಅರಣ್ಯ ಇಲಾಖೆ ಅನುಮತಿ ಪಡೆದಿರಲಿಲ್ಲ:
ಉಂಬ್ಳೆಬೈಲು ಅರಣ್ಯದಲ್ಲಿ ನಮ್ಮ ಅನುಮತಿ ಇಲ್ಲದೆ ಮರಗಳನ್ನು ಕಡಿತಲೆ ಮಾಡಲಾಗಿದೆ. ಬಜಾಜ್ ಎಲೆಕ್ಟ್ರಿಕಲ್ ಕಂಪನಿ ಅರಣ್ಯ ಇಲಾಖೆಗೆ ಅನುಮತಿಗೆ ಪತ್ರ ಬರೆದಿದೆ. ಆದರೆ, ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಈ ಕುರಿತ ಮಾಹಿತಿ ಮೇರೆಗೆ ಟ್ರಾಕ್ಟರ್ ವಶಕ್ಕೆ ಪಡೆದು, ನಾಲ್ವರ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ವಿದ್ಯುತ್ ಕಂಬ ಹಾಕುವಾಗ ಸುಮ್ಮನಿದ್ದ ಅರಣ್ಯ ಇಲಾಖೆ:
ಉಂಬ್ಳೆಬೈಲು ಅರಣ್ಯ ಪ್ರದೇಶವು ಭದ್ರಾ ಹುಲಿ ಸಂರಕ್ಷಿತ ಅರಣ್ಯವಾಗಿದೆ. ಇಲ್ಲಿ ಆನೆ ಹಾಗೂ ಹುಲಿಗಳು ಹೆಚ್ಚಾಗಿವೆ. ಅಲ್ಲದೆ ಈ ಭಾಗದಲ್ಲಿ ಅರಣ್ಯ ಸಿಬ್ಬಂದಿಗಳು ಹೆಚ್ವು ಗಸ್ತು ತಿರುಗುತ್ತಿರುತ್ತಾರೆ. ಹೀಗಿದ್ರೂ, ನಿರಂತರ ಜ್ಯೋತಿ ವಿದ್ಯುತ್ ಲೈನ್‌ಗಾಗಿ ಉಂಬ್ಳೆಬೈಲಿನಿಂದ ಕೈದೂಡ್ಲು ಗ್ರಾಮಕ್ಕೆ 3 ಕಿಮೀ ದೂರ ಕಂಬ ಹಾಕಿ, ಲೈನ್ ಹಾಕುವಾಗ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿತ್ತೇ? ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.
ಈಗ ಅಧಿಕಾರಿಗಳು ಗ್ರಾಮಸ್ಥರಿಗೆ ಈ ವಿಷಯ ತಿಳಿದಿದೆ ಎಂದು ದೂರು ದಾಖಲಿಸಿರುವ ಅನುಮಾನ ಎದುರಾಗಿದೆ. ಒಟ್ಟಾರೆ, ಅರಣ್ಯದಲ್ಲಿ ಏನಾಗುತ್ತಿದೆ ಎಂದು ಅರಣ್ಯ ಇಲಾಖೆಯವರಿಗೆ ತಿಳಿಯುತ್ತಿಲ್ಲ ಎಂಬುದೇ ದುರಂತದ ಸಂಗತಿ.