ಶಿವಮೊಗ್ಗ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆಗಸ್ಟ್ 5ರಂದು ದೆಹಲಿಗೆ ತೆರಳಲಿದ್ದು, ಅಂದು ಸಚಿವ ಸಂಪುಟದ ಕುರಿತು ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ. ವರಿಷ್ಠರ ಆದೇಶದ ಬಳಿಕವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಿದ್ದಾರೆ. ನಾನು ಇದೇ ಖಾತೆ ನೀಡಿ ಎಂದು ಕೇಳಿಲ್ಲ. ವರಿಷ್ಠರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ. ಜಿಲ್ಲೆಯ ವಿವಿಧ ಕಾರ್ಖಾನೆಗಳ ಕಾರ್ಮಿಕರಿಗೆ ಆಶ್ರಯ ಸಮಿತಿ ವತಿಯಿಂದ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು.
ತಾಲೂಕಿನ ಸಿದ್ಲಿಪುರದ ಕೈಗಾರಿಕಾ ಏರಿಯಾ ಪಕ್ಕದಲ್ಲಿರುವ 20 ಎಕರೆ ಪ್ರದೇಶದಲ್ಲಿ 2 ಸಾವಿರ G+2 ಮನೆ ನಿರ್ಮಿಸಲು ನಿರ್ಧರಿಸಲಾಗಿದೆ. ಹಿಂದೆ ರಾಜ್ಯ ಸರ್ಕಾರದ ಆದಾಯ ಮಿತಿಯಿಂದ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಸರ್ಕಾರದ ನಿಯಮದಂತೆ ಆದಾಯ ತೆರಿಗೆ ಮಿತಿ 3 ಲಕ್ಷಕ್ಕೆ ಏರಿಸಲಾಗಿದೆ. ಈಗಾಗಲೇ ಮನೆ ನಿರ್ಮಾಣಕ್ಕೆ ತಾಂತ್ರಿಕ ಒಪ್ಪಿಗೆ ದೊರಕಿದ್ದು, ಕಾರ್ಮಿಕರು ಆಗಸ್ಟ್ 15ರಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.
ಒಂದು ಮನೆ ನಿರ್ಮಾಣಕ್ಕೆ ₹ 7.50 ಲಕ್ಷ ವೆಚ್ಚ ತಗುಲುತ್ತದೆ. ಎಸ್ಸಿ/ಎಸ್ಟಿ ಜನಾಂಗದವರು ₹ 2.50 ಲಕ್ಷ ಕಟ್ಟಬೇಕು. ಹಾಗೂ ಸಾಮಾನ್ಯ ವರ್ಗದವರು ₹ 3 ಲಕ್ಷ ಪಾವತಿಸಬೇಕಿದೆ. ಇದರಲ್ಲಿ ಎಸ್ಸಿ/ಎಸ್ಟಿ ಜನಾಂಗಕ್ಕೆ ₹3.50 ಲಕ್ಷ ಹಾಗೂ ಸಾಮಾನ್ಯ ವರ್ಗಕ್ಕೆ ₹ 3 ಲಕ್ಷ ಸಾಲ ನೀಡಲಾಗುತ್ತದೆ. ರಾಜೀವ್ ಗಾಂಧಿ ಗೃಹ ನಿರ್ಮಾಣ ಯೋಜನೆಯಡಿ ಮನೆಗಳನ್ನು ಕಟ್ಟಿಸಿಕೊಡಲಾಗುತ್ತದೆ ಎಂದರು.